ADVERTISEMENT

ಆತ್ಮರಕ್ಷಣೆಗೆ ಕಳರಿಪಯಟ್ಟು ಕಲಿಕೆ ಅಗತ್ಯ: ಮೀನಾಕ್ಷಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 5:27 IST
Last Updated 14 ಜುಲೈ 2024, 5:27 IST
ಕಳರಿ ಪಯಟ್ಟು ಗುರು ಮೀನಾಕ್ಷಿ ಅಮ್ಮ ಅವರನ್ನು ಸನ್ಮಾನಿಸಲಾಯಿತು
ಕಳರಿ ಪಯಟ್ಟು ಗುರು ಮೀನಾಕ್ಷಿ ಅಮ್ಮ ಅವರನ್ನು ಸನ್ಮಾನಿಸಲಾಯಿತು   

ಉಡುಪಿ: ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಕಳರಿಪಯಟ್ಟು ಕಲಿಯಬೇಕು ಎಂದು ಪದ್ಮಶ್ರೀ ಪುರಸ್ಕೃತ ಕಳರಿಪಯಟ್ಟು ಗುರು ಮೀನಾಕ್ಷಿ ಅಮ್ಮ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಶ್ರೀಕೃಷ್ಣ ಸೇವಾ ಬಳಗದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಳರಿಪಯಟ್ಟು ಆತ್ಮರಕ್ಷಣೆಯ ಕಲೆಯಾಗಿದ್ದು ಮಕ್ಕಳಿಗೆ ಅದನ್ನು ಕಲಿಸಬೇಕು. ಅದು ಮಕ್ಕಳನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತದೆ ಎಂದರು.

ADVERTISEMENT

ಹಿಂದೆ ಕಳರಿಪಯಟ್ಟು ಕಲೆಯನ್ನು ಒಲಿಸಿಕೊಳ್ಳಲು 13 ವರ್ಷಗಳು ಬೇಕಾಗಿತ್ತು. ಈಗಿನ ಮಕ್ಕಳು ಬೇಗ ಕಲಿಯುತ್ತಿದ್ದಾರೆ ಎಂದು ಹೇಳಿದರು.

ಅದಮಾರು ಮಠಾಧೀಶ ಈಶಪ್ರಿಯತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಇನ್ನಾ ರಾಮದಾಸ ಮಡುಮಣ್ಣಾ ಅವರನ್ನು ಗೌರವಿಸಲಾಯಿತು. ಶಾಸಕ ಯಶ್‌ಪಾಲ್‌ ಸುವರ್ಣ ಉಪಸ್ಥಿತರಿದ್ದರು. ಶ್ರೀಕಾಂತ ಶೆಟ್ಟಿ ಕಾರ್ಕಳ ವಿಶೇಷ ಉಪನ್ಯಾಸ ನೀಡಿದರು.

ಬಳಿಕ ಮೀನಾಕ್ಷಿ ಅಮ್ಮ ಅವರು ಕಳರಿಪಯಟ್ಟು ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ದಿನೇಶನ್‌ ಕಣ್ಣೂರು ಬಳಗದಿಂದ ಕಳರಿಪಯಟ್ಟು ಪ್ರದರ್ಶನ ನಡೆಯಿತು. ರಾಘವೇಂದ್ರ ರಾವ್‌ ನಿರೂಪಿಸಿದರು.

ಮೀನಾಕ್ಷಿ ಅಮ್ಮ ಅವರು ಕಳರಿಪಯಟ್ಟು ಪ್ರದರ್ಶಿಸಿದರು
ನೋಡುಗರನ್ನು ಚಕಿತಗೊಳಿಸಿದ ಕಳರಿಪಯಟ್ಟು ಪ್ರದರ್ಶನ ಕಳರಿಪಯಟ್ಟು ಪ್ರದರ್ಶಿಸಿದ ಮೀನಾಕ್ಷಿ ಅಮ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.