ಉಡುಪಿ: ‘ವ್ಯಕ್ತಿತ್ವದ ವೈಭವೀಕರಣ ಸಲ್ಲದು. ವ್ಯಕ್ತಿತ್ವದ ಸಾಮಾಜೀಕರಣವಾಗಬೇಕು. ನಾನು, ನನ್ನ ಸಮಾಜ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಅದು ಸಾಧ್ಯ’ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್. ಅಲೂರ ಅಭಿಪ್ರಾಯಪಟ್ಟರು.
ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಅನುದಾನಿತ ಶಾಲಾ ಸಂಘಗಳ ವತಿಯಿಂದ ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 20 ಸಾವಿರ ಉಚಿತ ಸಮವಸ್ತ್ರ ವಿತರಣೆ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಳಿಕೆ, ಉಳಿಕೆ ಮತ್ತು ಬಳಕೆ ಇವು ಅರ್ಥಶಾಸ್ತ್ರದ ಮೂರು ಪದಗಳು. ಗಳಿಸಿದ್ದನ್ನು ಉಳಿಸಬೇಕು ಮತ್ತು ಅದನ್ನು ಸಮಾಜಕ್ಕಾಗಿ ಬಳಸಬೇಕು ಆಗ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಶಿಕ್ಷಕರು ಕೇವಲ ಭೌತಿಕ ಚಿಂತಕರಲ್ಲ. ಅವರು ಮಕ್ಕಳಲ್ಲಿ ಜ್ಞಾನದ ಅರಿವನ್ನು ಬೆಳೆಸುವ ಕೆಲಸ ಮಾಡಬೇಕು. ಜ್ಞಾನದ ಜೊತೆಗೆ ಕೌಶಲ, ಪ್ರೀತಿ, ಕಳಕಳಿ ಎಲ್ಲವೂ ಸಮ್ಮಿಳಿತವಾಗಬೇಕು ಆಗ ಶಿಕ್ಷಕ ವೃತ್ತಿ ದೈವಿಕವಾಗುತ್ತದೆ ಎಂದರು.
ಶಿಕ್ಷಕರು ಪ್ರತಿ ಮಗುವಿನ ಜ್ಞಾನ ಮಟ್ಟವನ್ನು ಅರಿತು, ಅವರ ಮನಸ್ಸಿಗೆ ಮುಟ್ಟುವಂತೆ ಪಾಠ ಮಾಡಬೇಕು. ಶಿಕ್ಷಕರಲ್ಲಿ ಅಹಂ ಇರಬಾರದು. ನಿರಾಳ ಭಾವ ಇರಬೇಕು. ಜೊತೆಗೆ ಶಿಕ್ಷಕರು ಪ್ರತಿದಿನ ವಿದ್ಯಾರ್ಥಿಗಳಷ್ಟೇ ಓದಬೇಕು ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಕ್ಕಳು ಶಿಕ್ಷಣವಂತರಾಗಬೇಕು ಎಂಬ ಉದ್ದೇಶದಿಂದ ನಮ್ಮ ಹಿರಿಯರು ಸ್ವಾರ್ಥ ಭಾವವಿಲ್ಲದೆ ಅನುದಾನಿತ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಆದರೆ ಇಂದು ಸರ್ಕಾರವು ಅನುದಾನಿತ ಮತ್ತು ಸರ್ಕಾರಿ ಶಾಲೆಗಳ ನಡುವೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದರು.
ನೂತನ ಶಿಕ್ಷಣ ನೀತಿಯು ಉತ್ತಮವಾಗಿದ್ದರೂ ರಾಜಕೀಯ ಕಾರಣಗಳಿಂದಾಗಿ ರಾಜ್ಯದಲ್ಲಿ ಅದನ್ನು ವಿರೋಧಿಸಲಾಗುತ್ತಿದೆ ಎಂದು ಹೇಳಿದರು.
ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್. ಶೆಟ್ಟಿ ಮಾತನಾಡಿ, ಇಂದು ರಾಜ್ಯದಲ್ಲಿ ಅನುದಾನಿತ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಹಲವು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಯಕ್ಷಗಾನ ಕಲಾರಂಗ ರಾರ್ಯದರ್ಶಿ ಮುರಳಿ ಕಡೆಕಾರ್, ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಜಯಶೀಲ ಶೆಟ್ಟಿ ಕಂದಾವರ, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಕೆ.ಅರುಣ್ ಕುಮಾರ್ ಶೆಟ್ಟಿ, ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಹಿತಿ ಇಂದಿರಾ ಹಾಲಂಬಿ ಅವರಿಗೆ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೇಶದ ಜನರ ಬಡತನ ನೀಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆಯಶ್ಪಾಲ್ ಸುವರ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.