ಪಡುಬಿದ್ರಿ: ಚಿನ್ನದ ಸರ ಎಂದು ನಂಬಿಸಿ ಕಾರ್ಮಿಕ ಮಹಿಳೆಯೊಬ್ಬರ ನಿಜವಾದ ಚಿನ್ನದ ಸರವನ್ನು ದೋಚಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ವಿಜಯಪುರ ಮುದ್ದೆಬಿಹಾಳದ ಬಸಮ್ಮ ಎಂಬುವರು ಮೋಸ ಹೋದ ಮಹಿಳೆ. ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ರಸ್ತೆಯಲ್ಲಿ ಹೋಗುತಿದ್ದಾಗ ಒಬ್ಬ ಮಹಿಳೆ ಹಾಗೂ ಪುರುಷ ಬಂದು, ಬಸಮ್ಮ ಅವರಿಗೆ ಕಪ್ಪು ದಾರದಲ್ಲಿ ಕಪ್ಪು ಮಣಿಗಳಿಂದ ಕೂಡಿದ ಮಧ್ಯದಲ್ಲಿ ತಾಳಿ,ಲಕ್ಷ್ಮಿ ಪದಕ ಇರುವ ಇರುವ ಚಿನ್ನದಂತೆ ತೋರುವ ಸರವನ್ನು ತೋರಿಸಿ ಚಿನ್ನದ ಸರ ಎಂದು ನಂಬಿಸಿದ್ದಾರೆ. ಇದರಲ್ಲಿ 6 ಪವನ್ ಚಿನ್ನ ಇದ್ದು, ಹಣದ ತುರ್ತು ಆವಶ್ಯಕತೆ ಇದೆ ಎಂದು ನಂಬಿಸಿ, ಅವರಿಗೆ ಕೊಟ್ಟಿದ್ದಾರೆ. ಬಸಮ್ಮ ಅವರಲ್ಲಿದ್ದ ಚಿನ್ನದ ಗುಂಡುಗಳಿರುವ ಕರಿಮಣಿಯೊಂದಿಗೆ ಪೋಣಿಸಿದ ಚಿನ್ನದ ತಾಳಿ ಸರ ಹಾಗೂ ಕಿವಿಯ ಬೆಂಡೋಲೆಯ ಮಾಟಿ ಒಂದು ಜೊತೆ ಸೇರಿ ಒಟ್ಟು ಸುಮಾರು 2 ಪವನ್ ತೂಕದ ₹1.50 ಲಕ್ಷ ಮೌಲ್ಯದ ಬಂಗಾರದ ಒಡವೆ ಹಾಗೂ ₹6 ಸಾವಿರ ನಗದನ್ನು ಪಡೆದುಕೊಂಡಿದ್ದಾರೆ. ಸರ ಪರಿಶೀಲನೆಗೆ ಅಂಗಡಿಗೆ ಹೋದಾಗ ಅದು ನಕಲಿ ಎಂಬುದು ಬಸಮ್ಮ ಅವರಿಗೆ ಅರಿವಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.