ADVERTISEMENT

ಪರಿಶಿಷ್ಟ ಜಾತಿಯವರಿಗೆ ಇಲ್ಲಿವೆ ಸರ್ಕಾರದ ಸೌಲಭ್ಯಗಳು

ನ.17ರವರೆಗೆ ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ: ಅರ್ಹರು ಸದುಪಯೋಗಪಡಿಸಿಕೊಳ್ಳಬಹುದು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 12:43 IST
Last Updated 9 ನವೆಂಬರ್ 2021, 12:43 IST

ಉಡುಪಿ: ಪರಿಶಿಷ್ಟ ಜಾರಿಗೆ ಸೇರಿದವರಿಗೆ ಸಮಾಜ ಕಲ್ಯಾಣ ಇಲಾಖೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ನ.17ರವರೆಗೆ ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ ಅರ್ಹರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಸರ್ಕಾರದ ವಿದ್ಯಾರ್ಥಿ ವೇತನ ಯೋಜನೆಯಡಿ ಪರಿಶಿಷ್ಟ ಜಾತಿ, ಸಮುದಾಯದ ವಿದ್ಯಾರ್ಥಿಗಳು ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಅಗತ್ಯ ವಿವರಗಳೊಂದಿಗೆ ನೋಂದಾಯಿಸಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಪೋರ್ಟಲ್‌ನಲ್ಲಿ ಪ್ರಸ್ತುತ 2020-21 ಹಾಗೂ 2021-22ನೇ ಸಾಲಿನ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

ವಿದ್ಯಾರ್ಥಿಗಳು ಕಾರಣಾಂತರಗಳಿಂದ 2019-20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ ಅಂಥವರು ಕೂಡ ವಿಶೇಷ ಅಭಿಯಾನದಲ್ಲಿ ಅರ್ಜಿ ಸಲ್ಲಿಸಬಹುದು. 2021-22ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪೋರ್ಟಲ್‌ನಿಂದ ‘ಫ್ರೀಶಿಪ್ ಕಾರ್ಡ್‌’ ಡೌನ್‌ಲೋಡ್ ಮಾಡಿಕೊಂಡು ಕಾಲೇಜಿಗೆ ಸಲ್ಲಿಸಿ ಉಚಿತವಾಗಿ ಶಿಕ್ಷಣ ಪಡೆಯಬಹುದು. ವಿದ್ಯಾರ್ಥಿ ವೇತನ ಮಂಜೂರಾಗುವ ಮೊದಲು ಕಾಲೇಜು ಶುಲ್ಕ ಪಾವತಿಸುವಂತೆ ಕಾಲೇಜುಗಳು ಒತ್ತಡ ಹಾಕುವಂತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

2020-21ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಯಡಿ 7,470 ವಿದ್ಯಾರ್ಥಿಗಳಿಗೆ ₹ 90 ಲಕ್ಷ, ಮೆಟ್ರಿಕ್ ನಂತರ ವಿದ್ಯಾರ್ಥಿವೇತನ ಯೋಜನೆಯಡಿ 2,037 ವಿದ್ಯಾರ್ಥಿಗಳಿಗೆ ₹ 1.52 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ.

ಬಹುಮಾನ: ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುವುದು. ದ್ವಿತೀಯ ಪಿಯುಸಿ (₹ 20,000), ಅಂತಿಮ ಪದವಿ ( ₹ 25,000), ಎಲ್ಲ ಸ್ನಾತಕೋತ್ತರ ಪದವಿ (₹30000), ವೃತ್ತಿ ಶಿಕ್ಷಣ (ಬಿ.ಇ, ಮೆಡಿಕಲ್ ₹ 35000) ನಗದು ಬಹುಮಾನವನ್ನುwww.sw.kar.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ಪ್ರಾಂಶುಪಾಲರಿಂದ ಧೃಢೀಕರಿಸಿ ಜಿಲ್ಲಾ ಸಮಾಜ ಕಲ್ಯಾಣ ಕಚೇರಿಗೆ ದಾಖಲೆಗಳನ್ನು ಸಲ್ಲಿಸಬೇಕು.

ಪ್ರೋತ್ಸಾಹಧನ:ಪರಿಶಿಷ್ಟ ಜಾತಿಯ ಹೆಣ್ಣು, ಹಿಂದೂ ಧರ್ಮದ ಸವರ್ಣೀಯ ಜನಾಂಗದ ಗಂಡನ್ನು ವಿವಾಹವಾದರೆ ₹ 3 ಲಕ್ಷ ಪ್ರೋತ್ಸಾಹಧನ ಇದೆ. (ವಯೋಮಿತಿ 18 ರಿಂದ 42 ವರ್ಷ). ಪರಿಶಿಷ್ಟ ಜಾತಿಯ ಗಂಡು ಹಿಂದೂ ಧರ್ಮದ ಇತರೆ ಸವರ್ಣೀಯ ಜನಾಂಗದ ಹೆಣ್ಣನ್ನು ಅಂತರ್ಜಾತಿ ವಿವಾಹವಾದರೆ ₹ 2 ಲಕ್ಷ ಪ್ರೋತ್ಸಾಹಧನ ಇದೆ. (ವಯೋಮಿತಿ 21 ರಿಂದ 45 ವರ್ಷ). ವಿವಾಹವಾದ 18 ತಿಂಗಳೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಮರು ಮದುವೆಯಾಗುವ ಪರಿಶಿಷ್ಟ ಜಾತಿಯ ವಿಧವೆಯರಿಗೆ ₹ 3 ಲಕ್ಷ ಪ್ರೋತ್ಸಾಹಧನವಿದ್ದು, ಕಾನೂನು ಬದ್ಧವಾಗಿ ವಿವಾಹವಾಗಿರುವ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾವಣೆಯಾಗಿರಬೇಕು. ಮರು ವಿವಾಹವಾದ ಒಂದು ವರ್ಷದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಪರಿಶಿಷ್ಟ ಜಾತಿಯ ಒಳ ಪಂಗಡದೊಳಗೆ ಅಂತರ್ಜಾತಿ ವಿವಾಹವಾದ ದಂಪತಿಗೆ ₹ 2 ಲಕ್ಷ ಪ್ರೋತ್ಸಾಹಧನವಿದ್ದು, ದಂಪತಿಯ ವಾರ್ಷಿಕ ಆದಾಯ ₹ 2 ಲಕ್ಷ ಮೀರಿರಬಾರದು. ವಿವಾಹವಾದ 18 ತಿಂಗಳೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ ದಂಪತಿಗೆ ₹ 50,000 ಪ್ರೋತ್ಸಾಹ ಧನವಿದ್ದು, ವಿವಾಹವಾದ ವರ್ಷದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.