ADVERTISEMENT

ಯೋಜನೆಗಳ ಮಾಹಿತಿ ರೈತರಿಗೆ ತಲುಪಿಸಿ: ಶಾಸಕ ಯಶ್‌ಪಾಲ್

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:01 IST
Last Updated 3 ಸೆಪ್ಟೆಂಬರ್ 2025, 4:01 IST
ಅರಿವು ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್‌ ಸುವರ್ಣ ಉದ್ಘಾಟಿಸಿದರು
ಅರಿವು ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್‌ ಸುವರ್ಣ ಉದ್ಘಾಟಿಸಿದರು   

ಉಡುಪಿ: ರೈತಾಪಿ ವರ್ಗದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಎಲ್ಲ ಯೋಜನೆಗಳ ಮಾಹಿತಿಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳು ಪ್ರಯೋಜನಕಾರಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲಾಖಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಆರ್ಥಿಕ ನೆರವು ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಭೇಟಿ ನೀಡುವ ರೈತರಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವುದರೊಂದಿಗೆ ಜಿಲ್ಲೆಯ ಹೆಚ್ಚು ರೈತರು ಈ  ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು ಎಂದರು.

ರೈತರು ಕೇವಲ ರೈತರಾಗಿ ಉಳಿಯದೇ ಉದ್ದಿಮೆ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಜಾರಿಗೆ ತಂದಿರುವ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಪ್ರಯೋಜನ ಜಿಲ್ಲೆಯ ಎಲ್ಲಾ ರೈತರು ಪಡೆಯುವಂತಾಗಲಿ ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಸೂರಜ್ ಶೆಟ್ಟಿ, ವೆಂಕಟೇಶ್ ನಾಯ್ಕ್, ರಾಜೇಶ್ ಡಿ.ಪಿ., ರೂಪಶ್ರೀ ಹಾಗೂ ಫಜಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ADVERTISEMENT

ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜು, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಎಂ.ಸಿ. ರೆಡ್ಡಪ್ಪ, ಲೀಡ್ ಬ್ಯಾಂಕ್‌ನ ಸುಮನ್, ಅರವಿಂದ್ ಭಾಗವಹಿಸಿದ್ದರು. ಕೃಷಿ ಇಲಾಖೆಯ ಅಧಿಕಾರಿ ಶ್ರೀರಾಮ್ ಹೆಗಡೆ ವಂದಿಸಿದರು.

ಸರ್ಕಾರದ ಯೋಜನೆಗಳ ಮಾಹಿತಿಯನ್ನು ರೈತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು
ಯಶ್‌ಪಾಲ್‌ ಸುವರ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.