ADVERTISEMENT

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಕೆಗೆ ಗ್ರೀನ್ ಸಿಗ್ನಲ್‌

ಪ್ರಸಕ್ತ ವರ್ಷದಿಂದಲೇ ಆಂಗ್ಲ ತರಗತಿ ಆರಂಭಕ್ಕೆ ಸರ್ಕಾರದ ಸೂಚನೆ; 22 ಶಾಲೆಗಳಲ್ಲಿ ಆರಂಭ

ಬಾಲಚಂದ್ರ ಎಚ್.
Published 20 ಮೇ 2019, 19:38 IST
Last Updated 20 ಮೇ 2019, 19:38 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಉಡುಪಿ: ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಕಲಿಯಬೇಕು ಎಂಬ ಬಹುದಿನಗಳ ಕನಸು ನನಸಾಗುವ ಕಾಲ ಬಂದಿದೆ.ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಉಡುಪಿಯಲ್ಲಿ 22 ಇಂಗ್ಲೀಷ್ ಶಾಲೆ:

ಉಡುಪಿ ಜಿಲ್ಲೆಯ 22 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಲಿವೆ.ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಶಾಲೆಗಳು, ಕಾಪು, ಕಾರ್ಕಳ, ಕುಂದಾಪುರ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಶಾಲೆಗಳಲ್ಲಿ ಇಂಗ್ಲೀಷ್‌ ಮೀಡಿಯಂ ತೆರೆಯಲಾಗುವುದು.

ADVERTISEMENT

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪೋಷಕರು ಈ ವರ್ಷದಿಂದಲೇ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಬಹುದು ಎಂದು ಡಿಡಿಪಿಐ ಶೇಷಶಯನ ಕಾರಿಂಜ ತಿಳಿಸಿದರು.

ಇಂಗ್ಲೀಷ್‌ ಬೋಧಿಸಲು ಪ್ರತ್ಯೇಕ ಶಿಕ್ಷಕರ ನೇಮಕಾತಿ ನಡೆಯುವುದಿಲ್ಲ. ಬೋಧಿಸುವ ಸಾಮರ್ಥ್ಯ ಇರುವ ಶಿಕ್ಷಕರನ್ನು ಈಗಾಗಲೇ ಗುರುತಿಸಿ ಅವರಿಗೆ ಡಯಟ್‌ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ. ರಾಜ್ಯಮಟ್ಟದ ಇಂಗ್ಲಿಷ್‌ ಭಾಷಾ ಸಂಪನ್ಮೂಲ ವ್ಯಕ್ತಿಗಳು ತರಬೇತಿಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ:

ಸರ್ಕಾರಿ ಶಾಲೆಗಳನ್ನು ಬಲಗೊಳಿಸಿ, ಹೆಚ್ಚು ಮಕ್ಕಳನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ 1,000 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದಾಗಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ, ಪ್ರತಿವಿಧಾನಸಭಾ ಕ್ಷೇತ್ರವಾರು ಇಂಗ್ಲಿಷ್ ಮಾಧ್ಯಮ ಆರಂಭಿಸಲು ಅರ್ಹತೆ ಇರುವ ಕನಿಷ್ಠ 4 ಶಾಲೆಗಳ ಪಟ್ಟಿ ಕಳುಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿತ್ತು.

ಅದರಂತೆ,ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 26 ಶಾಲೆಗಳನ್ನು ಹಾಗೂ 6 ಕೆಪಿಎಸ್‌ (ಕರ್ನಾಟಕ ಪಬ್ಲಿಕ್ ಶಾಲೆ) ಶಾಲೆಗಳನ್ನು ಗುರುತಿಸಿ ಡಿಡಿಪಿಐ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಪಟ್ಟಿಯನ್ನು ಪರಿಶೀಲಿಸಿದ ಸರ್ಕಾರ 22 ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

1ನೇ ತರಗತಿಗೆ ಮಾತ್ರ ಪ್ರವೇಶ:

ಈ ವರ್ಷ ಆಂಗ್ಲ ಮಾಧ್ಯಮದ 1ನೇ ತರಗತಿಗೆ ಮಾತ್ರ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು, ಮುಂದಿನ ವರ್ಷದಿಂದ ತರಗತಿ ವಿಸ್ತರಿಸಲು ತಿಳಿಸಲಾಗಿದೆ. ಜತೆಗೆ, ಇಂಗ್ಲೀಷ್ ಹಾಗೂ ಗಣಿತ ವಿಷಯಗಳಿಗೆ ಕೇಂದ್ರ ಪಠ್ಯಪುಸ್ತಕಗಳನ್ನು (ಎನ್‌ಸಿಇಆರ್‌ಟಿ) ಹಾಗೂ ಪರಿಸರ ಅಧ್ಯಯನ ಹಾಗೂ ಕನ್ನಡ ವಿಷಯಗಳಿಗೆ ಕರ್ನಾಟಕ ಪಠ್ಯ ಪುಸ್ತಕ ಸಂಘದ ಪಠ್ಯಪುಸ್ತಕಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಕೂಡಲೇ ಎನ್‌ಸಿಆರ್‌ಇಟಿ ಬಳಿ ಕೃತಿಸ್ವಾಮ್ಯ ಪಡೆದು 1ನೇ ತರಗತಿಯ ಗಣಿತ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿ, ಗಣಿತ ಹಾಗೂ ರಾಜ್ಯ ಪಠ್ಯಕ್ರಮದ ಪರಿಸರ ಅಧ್ಯಯನ ಪಠ್ಯಪುಸ್ತಕವನ್ನು ಎರಡೂ ಭಾಷೆಗಳಲ್ಲಿ ಮುದ್ರಿಸುವಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಿಗೆ ಸರ್ಕಾರ ಸೂಚನೆ ನೀಡಿದೆ.

ಇಂಗ್ಲಿಷ್ ಕಲಿಕೆ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಕಲಿಕಾ ಚಟುವಟಿಕೆಗಳ ಆಧಾರಿತವಾಗಿರಬೇಕು. ಪ್ರಾದೇಶಿಕ ಆಂಗ್ಲ ಭಾಷಾ ತರಬೇತಿ ಸಂಸ್ಥೆ ಹಾಗೂ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಹಯೋಗದಲ್ಲಿ ಶಿಕ್ಷಕರಿಗೆ ಕೈಪಿಡಿ, ಕಲಿಕಾ ಬೋಧನಾ ಸಾಮಗ್ರಿ, ಸ್ಮಾರ್ಟ್ ಕ್ಲಾಸ್‌ ತರಬೇತಿ ನೀಡಲು ಅನುಕೂಲವಾಗುವಂತೆ ಧ್ವನಿ, ದೃಶ್ಯಗಳನ್ನೊಳಗೊಂಡ ಇ–ಪಠ್ಯ ಅಭಿವೃದ್ಧಿ ಪಡಿಸುವಂತೆ ಶಿಕ್ಷಣ ಮತ್ತು ತರಬೇತಿ ನಿರ್ದೇಶನಾಲಯಕ್ಕೆ ನಿರ್ದೇಶಿಸಲಾಗಿದೆ.

ಇಂಗ್ಲಿಷ್ ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲಬಾಷಾ ತರಬೇತಿ ಸಂಸ್ಥೆಯಿಂದ 15 ದಿನ ತರಬೇತಿ ನೀಡುವಂತೆಯೂ ತಿಳಿಸಲಾಗಿದೆ.

ಯಾವ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ‌

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು, ಸ.ಹಿ.ಪ್ರಾ.ಶಾಲೆಡೊಂಬೆ, ಸ.ಹಿ.ಪ್ರಾ.ಶಾಲೆಉಪ್ಪುಂದ, ಸ.ಹಿ.ಪ್ರಾ.ಶಾಲೆ ಬಿದ್ಕಲಕಟ್ಟೆ,ಸ.ಹಿ.ಪ್ರಾ.ಶಾಲೆ ವಂಡ್ಸೆ, ಸ.ಹಿ.ಶಾಲೆ ವಂಡ್ಸೆ, ಜಿಎಚ್‌ಪಿಸ್‌ ನೆಂಪು, ಕುಕ್ಕೆಹಳ್ಳಿ, ಪಡಬಿದ್ರಿ ನಾಡ್ಸಾಲ್‌, ರಾಜೀವ ನಗರ ಸ.ಹಿ.ಪ್ರಾ.ಶಾಲೆ, ಹಿರಿಯಡ್ಕ–ಬೊಮ್ಮರಬೆಟ್ಟು ಜಿಎಂಪಿಎಚ್‌ಎಸ್‌, ಹೆಬ್ರಿ ಸ.ಹಿ.ಪ್ರಾ.ಶಾಲೆ, ಹೊಸ್ಮಾರು ಈದು ಸ.ಹಿ.ಪ್ರಾ.ಶಾಲೆ, ಮುನಿಯಾಲು–ವಾರಂಗ, ಪೆರ್ವಾಜೆ ಜಿಎಂಎಚ್‌ಪಿಎಸ್‌, ಬೀಜಾಡಿ ಪಡುಸ.ಹಿ.ಪ್ರಾ.ಶಾಲೆ, ಅಮಾಸೆಬೈಲು, ಕೋಟೇಶ್ವರ, ತೆಕ್ಕಟ್ಟೆ, ಕೊರ್ಕರ್ಣೆಸ.ಹಿ.ಪ್ರಾ.ಶಾಲೆ, ಬ್ರಹ್ಮಾವರ ಜಿಎಂಎಚ್‌ಪಿಎಸ್‌, ಸಂತೆಕಟ್ಟೆ ಜಿಎಚ್‌ಪಿಎಸ್‌, ವಳಕಾಡು ಜಿಎಂಎಚ್‌ಪಿಎಸ್‌ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಲಿವೆ.

ಎಲ್‌ಕೆಜಿ, ಯುಕೆಜಿ ಆರಂಭ

ಜಿಲ್ಲೆಯ 6 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣ ಆರಂಭಕ್ಕೆ (ಎಲ್‌ಕೆಜಿ, ಯುಕೆಜಿ) ಅವಕಾಶ ಕೊಡಲಾಗಿದೆ. ಚಿಕ್ಕ ಮಕ್ಕಳನ್ನು ಆಕರ್ಷಿಸುವಂತೆ ಶಾಲೆಗಳ ಅಂದ ಹೆಚ್ಚಿಸಲು ಹಾಗೂ ಗುತ್ತಿಗೆ ಆಧಾರದಲ್ಲಿ 10 ತಿಂಗಳ ಅವಧಿಗೆ ಅರ್ಹ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಹಣ ಬಿಡುಗಡೆಯಾಗಿದೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.