
ಉಡುಪಿ: ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಮೊದಲಾದ ಸಮಸ್ಯೆಗಳಿಂದಾಗಿ ಪ್ರಮುಖ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯವಾದ ಶೇಂಗಾವನ್ನು (ನೆಲಗಡಲೆ) ಎರಡನೇ ಬೆಳೆಯಾಗಿ ಬೆಳೆಯುತ್ತಿರುವ ರೈತರ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
ಜಿಲ್ಲೆಯ ಕೋಟ, ಕುಂದಾಪುರ ಮತ್ತು ಬೈಂದೂರು ಹೋಬಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭತ್ತದ ಕೊಯ್ಲು ಮುಗಿದ ಬಳಿಕ ಕೆಲವರು ತರಕಾರಿ ಕೃಷಿ ಮಾಡಿದರೆ, ಈ ಮೂರು ಹೋಬಳಿಗಳ ರೈತರು ಹಲವು ವರ್ಷಗಳಿಂದ ಶೇಂಗಾ ಬೆಳೆಯುತ್ತಿದ್ದಾರೆ.
ಈ ಬಾರಿ ಜಿಲ್ಲೆಯ 1,750 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ಹೇಳಿವೆ. ಕಳೆದ ಮೂರು ವರ್ಷಗಳ ಬಿತ್ತನೆ ಪ್ರದೇಶದ ಅಂಕಿ ಅಂಶಗಳನ್ನು ಗಮನಿಸಿದರೆ ಶೇಂಗಾ ಬೆಳೆ ಪ್ರದೇಶ ಕಡಿಮೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ.
ಈ ಬಾರಿ ಡಿಸೆಂಬರ್‌ನಲ್ಲೂ ಅಕಾಲಿಕ ಮಳೆ ಸುರಿಯುತ್ತಿರುವುದು ಶೇಂಗಾ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಗದ್ದೆಗಳಲ್ಲಿ ಹದವಾದ ತೇವಾಂಶ ಇದ್ದರಷ್ಟೇ ಈ ಬೆಳೆಗೆ ಸೂಕ್ತ. ಮಳೆಯಿಂದ ನೀರು ನಿಂತರೆ ಬೆಳೆಗೆ ಹಾನಿಯಾಗುತ್ತದೆ ಎನ್ನುತ್ತಾರೆ ಶೇಂಗಾ ಬೆಳೆಗಾರರು.
ಈ ವರ್ಷ ಮೇ ತಿಂಗಳಲ್ಲಿ ಆರಂಭವಾಗಿ ನಿರಂತರವಾಗಿ ಸುರಿದ ಮಳೆಗೆ ಹಲವು ತೋಟಗಾರಿಕಾ ಬೆಳೆಗಳು ನಾಶವಾಗಿ ರೈತರಿಗೆ ನಷ್ಟ ಉಂಟಾಗಿತ್ತು. ಭತ್ತದ ಕಟಾವಿನ ಸಮಯದಲ್ಲೂ ಮಳೆ ಬಂದ ಕಾರಣ ಹಲವೆಡೆ ರೈತರಿಗೆ ಬೆಳೆ ನಾಶವಾಗಿತ್ತು.
ಭತ್ತದ ಕಟಾವು ಮುಗಿದ ಬಳಿಕ ಇದೀಗ ರೈತರು ಗದ್ದೆಯನ್ನು ಹಸನುಗೊಳಿಸಿ ಶೇಂಗಾ ಕೃಷಿಗೆ ಸಿದ್ಧತೆ ನಡೆಸಿದ್ದಾರೆ. ಶೇ 20ರಷ್ಟು ರೈತರು ಈಗಾಗಲೇ ಶೇಂಗಾ ಬಿತ್ತನೆ ನಡೆಸಿದ್ದಾರೆ. ಕೆಲವೆಡೆ ಬಿರುಸಿನ ಮಳೆ ಸುರಿದಿರುವುದು ಶೇಂಗಾ ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ.
ಸಾಮಾನ್ಯವಾಗಿ ನವೆಂಬರ್ ತಿಂಗಳ ಅಂತ್ಯದಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ ಶೇಂಗಾ ಬಿತ್ತನೆ ನಡೆದರೆ ಮಾರ್ಚ್ ತಿಂಗಳ ವೇಳೆಗೆ ಶೇಂಗಾ ಕೊಯ್ಲಿಗೆ ಬರುತ್ತದೆ.
ಕೆ.ಜಿ. ಶೇಂಗಾದ ಬೆಳೆ ಕಳೆದ ವರ್ಷ ₹60 ಇತ್ತು. ಮಳೆ ಬಂದರೆ ಬೆಳೆಯು ಶಿಲೀಂಧ್ರ ದಾಳಿಗೂ ತುತ್ತಾಗಿ ನಷ್ಟ ಉಂಟಾಗುತ್ತದೆ ಎನ್ನುತ್ತಾರೆ ರೈತರು.
ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಪ್ರದೇಶ (ಹೆಕ್ಟೇರ್‌ಗಳಲ್ಲಿ)ವರ್ಷ;ಪ್ರದೇಶ2022–23;1,5852023–24;1,4102024–25;600 ಶೇಂಗಾ ಬೆಳೆಗಾರರಿಗೆ ಸವಾಲಾಗಿ ಕಾಡುತ್ತಿದೆ ಮಳೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ
ನಮ್ಮ ಜಿಲ್ಲೆಯಲ್ಲಿ ಎರಡನೇ ಬೆಳೆಯಾಗಿ ಶೇಂಗಾವನ್ನು ಆಯ್ದುಕೊಂಡಿರುವ ಹಲವು ರೈತರಿದ್ದಾರೆ. ಆದರೆ ಹವಾಮಾನ ವೈಪರೀತ್ಯ ರೈತರಿಗೆ ಸವಾಲಾಗಿ ಕಾಡುತ್ತದೆರವೀಂದ್ರ ಗುಜ್ಜರಬೆಟ್ಟು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ
‘ಮಳೆಯ ಆತಂಕ ಕಾಡುತ್ತಿದೆ’
‘ಈ ಬಾರಿ ಶೇಂಗಾ ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಮತ್ತೆ ಅಲ್ಲಲ್ಲಿ ಮಳೆ ಸುರಿದಿರುವುದು ನಮ್ಮಲ್ಲಿ ಆತಂಕ ಉಂಟು ಮಾಡಿದೆ. ಗದ್ದೆಗಳಲ್ಲಿ ತೇವಾಂಶ ಅಧಿಕವಾದರೆ ಶೇಂಗಾ ಬಿತ್ತನೆಗೆ ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ರೈತ ಧ್ವನಿ ಕೋಟ ಅಧ್ಯಕ್ಷ ಜಯರಾಮ ಶೆಟ್ಟಿ. ‘ಶೇಂಗಾವು 90 ದಿನಗಳಲ್ಲಿ ಇಳುವರಿ ನೀಡುವ ಬೆಳೆಯಾಗಿದೆ. ಅದಕ್ಕೆ ಹೆಚ್ಚಿನ ಕಾರ್ಮಿಕರ ಅಗತ್ಯವೂ ಇದೆ. ಕೃಷಿ ಕಾರ್ಮಿಕರ ಕೊರತೆ ಕೂಡ ಕೆಲ ರೈತರು ಶೇಂಗಾ ಬೆಳೆಯಿಂದ ವಿಮುಖರಾಗಲು ಕಾರಣವಾಗಿದೆ’ ಎನ್ನುತ್ತಾರೆ ಅವರು. ‘ನಾವು ಬೆಳೆಯುವ ಶೇಂಗಾಕ್ಕೆ ನೇರ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. ದಲ್ಲಾಳಿಗಳ ಮೂಲಕ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಬಿತ್ತನೆ ಬೀಜವನ್ನು ಹುಬ್ಬಳಿ ಗದಗದಿಂದಲೂ ತರಿಸುತ್ತೇವೆ. ಕೃಷಿ ಇಲಾಖೆಯವರು ಬಿತ್ತನೆ ಬೀಜ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.