ADVERTISEMENT

ಗ್ರಾಮಕ್ಕೊಂದು ಅರಣ್ಯ ಬೆಳೆಸಿ,ಉಳಿಸಿ: ಅರಣ್ಯಾಧಿಕಾರಿ ಪಿ. ಶ್ರೀಧರ್ ಕರೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:21 IST
Last Updated 7 ಜುಲೈ 2025, 4:21 IST
ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು
ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು   

ಪಡುಬಿದ್ರಿ: ನಮ್ಮ ಸ್ವಾರ್ಥಕ್ಕಾಗಿ ಅಭಿವೃದ್ಧಿ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಇನ್ನಷ್ಟು ಗಂಭೀರ ಪರಿಣಾಮ ಎದುರಿಸಬೇಕಾದೀತು. ಈ ನಿಟ್ಟಿನಲ್ಲಿ ಗ್ರಾಮಕ್ಕೊಂದು ಅರಣ್ಯ ಬೆಳೆಸಿ ಉಳಿಸಬೇಕು ಎಂದು ಮೂಡುಬಿದಿರೆ ಅರಣ್ಯಾಧಿಕಾರಿ ಪಿ. ಶ್ರೀಧರ್ ಕರೆ ನೀಡಿದರು.

ಭಾನುವಾರ ಬೆಳಪು ಗ್ರಾಮ ಪಂಚಾಯಿತಿ, ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಸಹಯೋಗದಲ್ಲಿ ಪಂಚಾಯಿತಿ ಸಭಾಂಗಣದಲ್ಲ ನಡೆದ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ, ಸಾವಯವ ಕೃಷಿಕರು ಮತ್ತು ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಸುತ್ತ ಶೇ 22ರಷ್ಟು ಪರಿಸರವನ್ನು ಮಾತ್ರ ಇಂದು ಕಾಣಬಹುದು. ಅರಣ್ಯ ರಕ್ಷಣೆ ಅರಣ್ಯ ಇಲಾಖೆಯವರ ಕೆಲಸ ಮಾತ್ರವಲ್ಲದೆ ಪ್ರತಿ ನಾಗರಿಕರ ಜವಾಬ್ದಾರಿ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ.ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಎಲ್ಲಾ ರೋಗಕ್ಕೂ ಪರಿಸರ ಮದ್ದು. ಪರಿಸರಕ್ಕೆ ಸಮಸ್ಯೆ ತಂದೊಡ್ಡಿದ ನಾವು ಇಂದು ಸಮಸ್ಯೆ ಪರಿಹಾರಕ್ಕಾಗಿ ಪರಿಸರಕ್ಕೆ ಮಹತ್ವ ನೀಡಬೇಕಿದೆ. ಒಂದು ಲಕ್ಷ ಗಿಡ ನೆಡುವ ಸಂಕಲ್ಪ ಮಾಡಲಾಗಿದೆ ಎಂದರು.

ಸನ್ಮಾನ, ಸಸಿ ವಿತರಣೆ: ಮಾಜಿ ಯೋಧರಾದ ಗೋಪಾಲ ಪೂಜಾರಿ, ಅನಂತರಾಮ ಭಟ್, ಗ್ರಾಮದ ಸಾವಯವ ಕೃಷಿಕ ಜಗನ್ನಾಥ ಪೂಜಾರಿ, ಗಣೇಶ್ ಶೆಟ್ಟಿ ಬೆಳಪು, ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಎರಡು ಸಾವಿರ ಸಸಿಗಳನ್ನು ವಿತರಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಹನವಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಅರಣ್ಯಾಧಿಕಾರಿ ಮಲ್ಲಿಕಾರ್ಜುನ, ಬೆಳಪು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಶರತ್ ಕುಮಾರ್, ಸುಲೇಮಾನ್, ಸೌಮ್ಯ ಸುರೇಂದ್ರ, ನಸೀಮಾ ಬಾನು, ರೂಪಾ ಆಚಾರ್ಯ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿಸೋಜ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.