ADVERTISEMENT

ಕೌಶಲ ವೃದ್ಧಿಗೆ,ಸ್ವ ಉದ್ಯೋಗಕ್ಕೆ ಜಿಟಿಟಿಸಿ ಸಹಕಾರಿ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 14:57 IST
Last Updated 24 ಸೆಪ್ಟೆಂಬರ್ 2021, 14:57 IST
ಬ್ರಹ್ಮಾವರ ತಾಲ್ಲೂಕು ಉಪ್ಪೂರಿನಲ್ಲಿ ನಿರ್ಮಾಣವಾಗಿರುವ ಜಿಟಿಟಿಸಿ ಕಟ್ಟಡ
ಬ್ರಹ್ಮಾವರ ತಾಲ್ಲೂಕು ಉಪ್ಪೂರಿನಲ್ಲಿ ನಿರ್ಮಾಣವಾಗಿರುವ ಜಿಟಿಟಿಸಿ ಕಟ್ಟಡ   

ಉಡುಪಿ: ಬ್ರಹ್ಮಾವರ ತಾಲ್ಲೂಕು ಕೊಳಲಗಿರಿ ಊಪ್ಪೂರಿನಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ತರಬೇತಿ ಕಟ್ಟಡ ಮತ್ತು ತರಬೇತಿ ಕಾರ್ಯಾಗಾರ ಕಟ್ಟಡವನ್ನು ನಬಾರ್ಡ್ ಯೋಜನೆಯಡಿ ₹ 11 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ವಿದ್ಯಾರ್ಥಿ ವಸತಿ ನಿಲಯ ಮತ್ತು ಉಪಹಾರ ಕಟ್ಟಡವನ್ನು ಎಸ್‌ಎಸ್‌ಡಿಐ ಯೋಜನೆಯಡಿ ₹ 4.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಎಐಸಿಟಿಇ ಇಂದ ಅನುಮೋದನೆಗೊಂಡ ಎರಡು ದೀರ್ಘಾವಧಿ ಡಿಪ್ಲೊಮಾ ತರಬೇತಿಗಳು ಲಭ್ಯವಿದ್ದು, ಡಿಪ್ಲೋಮ ಇನ್ ಟೂಲ್ ಅಂಡ್ ಡೈ ಮೇಕಿಂಗ್ (3 ಪ್ಲಸ್ 1 ವರ್ಷ), ಡಿಪ್ಲೋಮ ಇನ್ ಮೆಕ್ಯಾಟ್ರಾನಿಕ್ಸ್ (3 ಪ್ಲಸ್ 1 ವರ್ಷ) ಕೋರ್ಸ್‌ಗಳನ್ನು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಲಿಯಬಹುದು.

ADVERTISEMENT

ಜಿಟಿಟಿಸಿ ಸಂಸ್ಥೆಯು ಟೋಯೊಟ ಕಿರ್ಲೋಸ್ಕರ್ ಕಂಪನಿಯ ಸಹಯೋಗದೊಂದಿಗೆ ಜಿಟಿಟಿಸಿಯಲ್ಲಿ ಆಟೊಮೊಟಿವ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲಿ ಫಿಟ್ಟರ್ ಹಾಗೂ ವೆಲ್ಡರ್‌ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಈ ಕೋರ್ಸ್‍ಗಳಿಗೆ ಆಟೊಮೆಟಿವ್ ಸ್ಕಿಲ್ ಸೆಕ್ಟರ್ ಕೌನ್ಸಿಲ್‌ನ ಮಾನ್ಯತೆ ಇದೆ.

ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ ಮತ್ತು ವಿಷೇಶ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಫಿಟ್ಟರ್, ಟರ್ನ್‍ರ್, ಮಿಲ್ಲರ್, ಗ್ರೈಂಡರ್, ಟೂಲ್ ರೂಮ್ ಮೆಷಿನಿಸ್ಟ್, ಕಾಂಪೋಸಿಟ್ ಮೆಷಿನಿಸ್ಟ್, ಸಾಲಿಡ್ ವರ್ಕ್ಸ್‌, ಯೂನಿಗ್ರಾಫಿಕ್ಸ್, ಆಟೋಕ್ಯಾಡ್, ಮಾಸ್ಟರ್ ಕ್ಯಾಮ್, ಸಿಎನ್‍ಸಿ ಪ್ರೋಗ್ರಾಮಿಂಗ್ ಅಂಡ್ ಆಪರೇಷನ್, ಅಡ್ವಾನ್ಸ್ ಮೆಷಿನಿಸ್ಟ್, ಸಿಎನ್‌ಸಿ ಮಿಲ್ಲಿಂಗ್, ಸಿಎನ್‌ಸಿ ಟೆಕ್ನಾಲಜಿಸ್ಟ್, ಕ್ಯಾಡ್ ಕ್ಯಾಮ್, ಮೆಟ್ರಾಲಾಜಿ ಹಾಗೂ ಮೆಶರ್‌ಮೆಂಟ್‌ ಸಿಸ್ಟಂನಂತರ ಅಲ್ಪಾವಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಎಸ್ಸೆಸ್ಸೆಲ್ಸಿ ಐಟಿಐ, ಡಿಪ್ಲೊಮಾ ಹಾಗೂ ಬಿಇ ವಿದ್ಯಾರ್ಥಿಗಳಿಗೆ ಉನ್ನತ ಕೌಶಲ ತರಬೇತಿ ನೀಡಲಾಗುವುದು. ದೀರ್ಘಾವಧಿ ಹಾಗೂ ಅಲ್ಪಾವಧಿ ಸೇರಿದಂತೆ ವಾರ್ಷಿಕ 500 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಪರಿಶಿಷ್ಠ ಜಾತಿ, ಪಂಗಡ, ಹಿಂದುಳಿದ, ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇದರಿಂದ ‌ಅನುಕೂಲವಾಗಲಿದೆ.

ಈಗಾಗಲೇ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿ ಜಿಟಿಟಿಸಿಯಲ್ಲಿ ಹೆಚ್ಚುವರಿ ಉನ್ನತ ಕೌಶಲ ತರಬೇತಿ ಪಡೆದು ವೃತ್ತಿಪರ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.ಜತೆಗೆ ಜಿಟಿಟಿಸಿಯಲ್ಲಿ ತಾಂತ್ರಿಕ ಕೌಶಲ ತರಬೇತಿ ಪಡೆದು ಸ್ವ-ಉದ್ಯೋಗ ಕೂಡ ಆರಂಭಿಸಬಹುದು.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಕರ್ನಾಟಕ ಮತ್ತು ಡೆನ್ಮಾರ್ಕ್ ಸರ್ಕಾರಗಳ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ 1972ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಕ್ಷೇತ್ರಕ್ಕೆ ಒದಗಿಸುವುದು ಹಾಗೂ ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು ಸಂಸ್ಥೆಯ ಉದ್ದೇಶ.

ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್, ಮೆಕಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್, ಎಂ.ಟೆಕ್ ಇನ್ ಟೂಲ್ ಎಂಜಿನಿಯರಿಂಗ್, ಟೂಲ್ ಡಿಸೈನ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ರಾಜ್ಯದಲ್ಲಿ 28 ಕೇಂದ್ರಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.