ADVERTISEMENT

ಸರ್ಕಾರವೇ ಬಿ.ಆರ್‌.ಎಸ್‌ ಆಸ್ಪತ್ರೆ ನಿರ್ವಹಣೆ ಮಾಡಲಿ: ಡಾ.ಪಿ.ವಿ.ಭಂಡಾರಿ

ಹಾಜಿ ಅಬ್ದುಲ್ಲ ಮೆಮೊರಿಯಲ್ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 14:08 IST
Last Updated 7 ಆಗಸ್ಟ್ 2021, 14:08 IST
ಪಿ.ವಿ.ಭಂಡಾರಿ, ಹಾಜಿ ಅಬ್ದುಲ್ಲ ಮೆಮೊರಿಯಲ್ ಚಾರಿಟಬಲ್‌ ಟ್ರಸ್ಟ್ ಅಧ್ಯಕ್ಷ
ಪಿ.ವಿ.ಭಂಡಾರಿ, ಹಾಜಿ ಅಬ್ದುಲ್ಲ ಮೆಮೊರಿಯಲ್ ಚಾರಿಟಬಲ್‌ ಟ್ರಸ್ಟ್ ಅಧ್ಯಕ್ಷ   

ಉಡುಪಿ: ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಹಾಜಿ ಅಬ್ದುಲ್ಲ ಮೆಮೊರಿಯಲ್ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಹಾಜಿ ಅಬ್ದುಲ್ಲ ಅವರು ಸರ್ಕಾರಕ್ಕೆ ದಾನವಾಗಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಜಾಗವನ್ನು 2016ರಲ್ಲಿ ಅಂದಿನ ಸರ್ಕಾರ ಬಿ.ಆರ್‌.ಶೆಟ್ಟಿ ಕಂಪೆನಿಗೆ ನೀಡಿ, ಪ್ರತಿಯಾಗಿ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಆಸ್ಪತ್ರೆ ಸ್ಥಾಪನೆಗೆ ಮುಂದಾಯಿತು. ಅಂದೇ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರೂ ಪ್ರಯೋಜನವಾಗಲಿಲ್ಲ.

ಈಗ ಬಿ.ಆರ್‌.ಎಸ್ ಆಡಳಿತ ಮಂಡಳಿ ಆಸ್ಪತ್ರೆ ನಿರ್ವಹಣೆ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಇದರಿಂದ ಬಡ ರೋಗಿಗಳಿಗೆ ತೊಂದರೆ ಎದುರಾಗಿದೆ ಎಂದು ಪಿ.ವಿ.ಭಂಡಾರಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

200 ಬೆಡ್‌ಗಳ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯನ್ನು ಕೂಡಲೇ ಸರ್ಕಾರ ವಹಿಸಿಕೊಳ್ಳಬೇಕು. ನಗರದ ಹೃದಯಭಾಗದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಾಜಿ ಬುಡನ್‌ ಶುಶ್ರೂಷಾಲಯ ಮೊದಲಿನಂತೆ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಆ.12ರಂದು ದಾನಿ ಹಾಜಿ ಅಬ್ದುಲ್ಲ ಅವರು ಮರಣ ಹೊಂದಿದ ದಿನವಾಗಿದ್ದು, ಅಂಗವಾಗಿ ಗಿಡ ನೆಡುವುದು, ಹಿರಿಯ ನಾಗರಿಕರಿಗೆ ಭೋಜನದ ವ್ಯವಸ್ಥೆಯನ್ನು ಟ್ರಸ್ಟ್‌ ಮೂಲಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಸೈಯದ್ ಸಿರಾಜ್ ಅಹಮದ್, ಖಜಾಂಚಿ ಇಕ್ಬಾಲ್ ಮನ್ನ, ಟ್ರಸ್ಟಿ ಹುಸೇನ್ ಕೋಡಿಬೆಂಗ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.