ADVERTISEMENT

ಅಂಗವಿಕಲರಲ್ಲಿ ಆತ್ಮವಿಶ್ವಾಸ ಬೆಳೆಸಿ ಕೆ. ವಿದ್ಯಾಕುಮಾರಿ ಸಲಹೆ

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 6:10 IST
Last Updated 4 ಡಿಸೆಂಬರ್ 2024, 6:10 IST
ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಉಡುಪಿ: ಅಂಗವಿಕಲರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.

ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ (ಮಿನಿಹಾಲ್) ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲ ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಶಾಲಾ- ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಕಾಲದಲ್ಲಿ ವಿಕಲಚೇತನರಿಗೆ ವಿದ್ಯಾಭ್ಯಾಸದ ಅವಕಾಶಗಳ ಜೊತೆಗೆ ಕೌಶಲಾಭಿವೃದ್ಧಿಗಳ ಕಲಿಕೆಯು ಅವರ ಬದುಕಿನಲ್ಲಿ ಸಾಧನೆ ಮಾಡುವಂತಹ ಭರವಸೆ ಮೂಡಿಸುತ್ತಿದೆ ಎಂದು ಹೇಳಿದರು.

ಅಂಗವಿಕಲ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದರಿಂದ ಅವರ ದೌರ್ಬಲ್ಯಗಳ ಹೊರತಾಗಿಯೂ ಅದಮ್ಯ ಶಕ್ತಿ ಅವರಲ್ಲಿದೆ ಎಂಬುದನ್ನು ನಿರೂಪಿಸಲು ಸಾಧ್ಯ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್‌. ಯೋಗೇಶ್ ಮಾತನಾಡಿ, ಅಂಗವಿಕಲರ ಏಳಿಗೆಗೆ ಕುಟುಂಬದ ಸದಸ್ಯರು ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಅಂಗವಿಕಲರಿಗಾಗಿ ಕಾನೂನು ಅಡಿಯಲ್ಲಿ ಅನೇಕ ಹಕ್ಕುಗಳನ್ನು ನೀಡಿದ್ದು, ಅವರ ಶ್ರೇಯಸ್ಸು ಹಾಗೂ ಮಾನವ ಹಕ್ಕುಗಳಿಗೆ ಚ್ಯುತಿ ತರದಂತೆ ಅವರ ಅಭಿವೃದ್ಧಿಯಲ್ಲಿ ಸಹಕಾರ ನೀಡಬೇಕು ಎಂದು ಪ್ರತಿಪಾದಿಸಿದರು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ವೈದ್ಯಕೀಯ ವೆಚ್ಚ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹಾಗೂ ಡಿಡಿಪಿಐ ಗಣಪತಿ ಮಾತನಾಡಿದರು.

ವಿಶೇಷಚೇತನರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕವಿತಾ, ನಿಶಾಂತ, ಅನುರಾಗ್ ನಾಯಕ್, ಕಿಶೋರ್, ಶ್ರೇಯಸ್ ಭಟ್, ಸುರೇಶ್ ಬಿ. ಪೂಜಾರಿ, ಟಿ.ಎಸ್ ಹುಸೇನ್, ಎಚ್. ಸಂಕೇತ್ ಕುಮಾರ್ ಶೆಟ್ಟಿ, ಶಶಿಕಲಾ, ಶ್ರೀಲತಾ ಹಾಗೂ ಕೃಷ್ಣ ದೇವಾಡಿಗ, ಜಗದೀಶ್ ಭಟ್, ದಯಾನಂದ ಕಾಪು, ಜಯ ಜತ್ತನ್, ನಿರಂಜನ ಭಟ್ ಹಾಗೂ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಎಲ್ಲಾ ತಾಲ್ಲೂಕುಗಳ ವಿಶೇಷ ಮಕ್ಕಳಿಗೆ ಆಯೋಜಿಸಲಾದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ನಗರಸಭೆ ಸದಸ್ಯ ವಿಜಯ್ ಕೊಡವೂರು, ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಜಿಲ್ಲಾ ವೈದ್ಯಾಧಿಕಾರಿ ಡಾ. ಐ.ಪಿ.ಗಡಾದ್, ನಿರಂಜನ್ ಭಟ್, ಆಗ್ನೇಸ್ ಕುಂದರ್, ಜಯ ವಿಠಲ್, ಡಿಡಿಆರ್‌ಸಿ ಸಿಬ್ಬಂದಿ, ವಿಶೇಷ ಶಾಲಾ ಮಕ್ಕಳು, ಶಿಕ್ಷಕ-ಶಿಕ್ಷಕಿಯರು ಇದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಎಚ್. ಹಾಗೂ ಡಾ.ಕಾಂತಿ ನಿರೂಪಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ವಂದಿಸಿದರು.

ಅಂಗವಿಕಲರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಬಗೆಗಿನ ಮಾಹಿತಿಯನ್ನು ಸಮರ್ಪಕವಾಗಿ ತಲುಪಿಸಬೇಕು
ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.