ಉಡುಪಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆ ಶುಕ್ರವಾರವೂ ಮುಂದುವರಿದಿದ್ದು, ನಗರದ ಹೊರವಲಯದಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೆಗಳ ಸುತ್ತಲೂ ನೀರು ತುಂಬಿರುವುದರಿಂದ ಜನರು ಸಂಕಷ್ಟಕ್ಕೊಳಗಾದರು. ಕೆಲವೆಡೆ ಕೃಷಿ ಭೂಮಿಯೂ ಜಲಾವೃತವಾಗಿದೆ.
ಉಡುಪಿ ನಗರದ ಹೊರವಲಯದ ಅಲೆವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ತೂರಿನಲ್ಲಿ ನೆರೆ ಉಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.
ಶುಕ್ರವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ ಕುಕ್ಕಿಕಟ್ಟೆ ಜಂಕ್ಷನ್‌ನಿಂದ ಡಯಾನ ಟಾಕೀಸ್ ಕಡೆ ಸಾಗುವ ರಸ್ತೆಯಲ್ಲಿ ಮಳೆ ನೀರು ನಿಂತಿತ್ತು. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮಳೆಯ ನೀರು ರಸ್ತೆಯಲ್ಲಿ ತೋಡಿನಂತೆ ಹರಿದು ಹೋಗಿದೆ. ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಯಿತು. ಆತ್ರಾಡಿಯಲ್ಲಿ ಸತತ ಮಳೆಯಿಂದಾಗಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಸಂಕಷ್ಟಕ್ಕೊಳಗಾದರು.
ಹಾನಿ: ಉಡುಪಿಯ ಉದ್ಯಾವರ, ಮೂಡುತೋನ್ಸೆ, ಪಡು ತೋನ್ಸೆ, ಬೈರಂಪಳ್ಳಿ, ಬೈಂದೂರಿನ ಬಿಜೂರು, ಮರವಂತೆ, ಕೆರ್ಗಾಲು, ಉಪ್ಪುಂದ, ಯಡ್ತರೆ ಮೊದಲಾದೆಡೆ ಭಾರಿ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿದೆ.
ರೆಡ್ ಅಲರ್ಟ್: ಭಾರಿ ಮಳೆಯಾಗುವ ಸಾಧ್ಯ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿ ಇದೇ 20ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಇದೇ 21ರ ವರೆಗೆ ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬ್ರಹ್ಮಾವರ ಪರಿಸರದಲ್ಲಿ ಪ್ರವಾಹ
ಬ್ರಹ್ಮಾವರ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ.
ಬನ್ನಾಡಿ, ಅಚ್ಲಾಡಿ, ಗಿಳಿಯಾರು, ಉಪ್ಲಾಡಿ, ಕಾರ್ಕಡದಲ್ಲಿ ನೆರೆಯಿಂದ ಎಕರೆ ಗಟ್ಟಲೆ ಕೃಷಿ ಭೂಮಿ ಜಲಾವೃತಗೊಂಡಿದೆ. ಹಲವು ಮನೆಗಳ ಸುತ್ತಮುತ್ತಲೂ ಪ್ರವಾಹದ ನೀರು ನಿಂತಿದೆ. ಆರೂರು, ಉಪ್ಪೂರು, ಉಗ್ಗೇಲ್ ಬೆಟ್ಟು ಗ್ರಾಮದಲ್ಲಿಯೂ ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದು ಮನೆಗಳು ಜಲಾವೃತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.