ಉಡುಪಿ: ಜಿಲ್ಲೆಯಾದ್ಯಂತ ಶನಿವಾರವೂ ಬಿರುಸಿನ ಮಳೆ ಸುರಿದಿದ್ದು, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡಿದರು.
ಕೊಡವೂರು ವಾರ್ಡಿನ ತೋಂದುಬೆಟ್ಟಿನಲ್ಲಿ ಭಾರಿ ಗಾಳಿ, ಮಳೆಗೆ ಗಿರಿಜಾ ಮಡಿವಾಳ್ತಿ ಎಂಬುವವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲಿಸಿದರು.
ಉಡುಪಿ ತಾಲ್ಲೂಕಿನ ಪೆರ್ಡೂರಿನ ಮುದ್ದು ನಾಯಕ್, ಕೊಡವೂರಿನ ಹರಿ ಶೆಟ್ಟಿಗಾರ್, ಮರ್ಣೆಯ ರಮೇಶ್ ಪ್ರಭು ಅವರ ಮನೆಗಳಿಗೆ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಹಿರೇಬೆಟ್ಟುವಿನ ರಾಮ ನಾಯ್ಕ್ ಅವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಾರ್ಕಳದಲ್ಲಿ 5ಸೆಂ.ಮೀ., ಕುಂದಾಪುರದಲ್ಲಿ 6 ಸೆಂ.ಮೀ., ಉಡುಪಿಯಲ್ಲಿ 8 ಸೆಂ.ಮೀ., ಬೈಂದೂರಿನಲ್ಲಿ 8 ಸೆಂ.ಮೀ., ಬ್ರಹ್ಮಾವರದಲ್ಲಿ 9 ಸೆಂ.ಮೀ., ಕಾಪುವಿನಲ್ಲಿ 4 ಸೆಂ.ಮೀ, ಹೆಬ್ರಿ ವ್ಯಾಪ್ತಿಯಲ್ಲಿ 11 ಸೆಂ.ಮೀ. ಮಳೆಯಾಗಿದೆ.
ಕುಚ್ಚೂರು: ಕೃಷಿ ಭೂಮಿ ಮುಳುಗಡೆ
ಹೆಬ್ರಿ: ತಾಲ್ಲೂಕಿನ ಚಾರ ನವೋದಯದ ಬಳಿ ನಿರ್ಮಾಣವಾಗಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗಲು ಅಳವಡಿಸಿದ್ದ ಗೇಟ್ ತೆರೆಯದ ಕಾರಣ ಕುಚ್ಚೂರಿನಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದೆ. ಸಣ್ಣ ನೀರಾವರಿ ಇಲಾಖೆಯವರು ಅಣೆಕಟ್ಟೆಯ ಸ್ವಯಂ ಚಾಲಿತ ಗೇಟನ್ನು ಮೇಲೆತ್ತಿದ್ದಾರೆ. ಆದರೆ ಕುಚ್ಚೂರು ಬದಿಯಿಂದ ನೀರು ಸೀತಾನದಿಗೆ ಸೇರುವ ಜಾಗದಲ್ಲಿ ಅಳವಡಿಸಿದ್ದ ಗೇಟ್ ತೆರೆಯದೆ ಇರುವುದರಿಂದ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಹಿಂದೆಯೂ ಇಲ್ಲಿ ಭಾರಿ ಪ್ರಮಾಣದಲ್ಲಿ ಕೃಷಿ ಭೂಮಿ ಮುಳುಗಡೆಯಾಗಿತ್ತು. ಪುಷಿಂಗ್ ವ್ಯವಸ್ಥೆ ಮಾಡಿಕೊಟ್ಟು ನೀರು ಕೃಷಿ ಭೂಮಿಯಿಂದ ಹೊರ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗೇಟು ತೆರೆಯದೆ ಇರುವುದರಿಂದ ಭಾರಿ ಪ್ರಮಾಣದಲ್ಲಿ ನೀರು ಅಡಿಕೆ ತೋಟದಲ್ಲಿ ನಿಂತಿದೆ.
3 ಮನೆಗಳಿಗೆ ಹಾನಿ, ಕಡಲು ಪ್ರಕ್ಷುಬ್ಧ
ಕಾಪು ತಾಲ್ಲೂಕಿನಲ್ಲಿ ಮನೆಯೊಂದಕ್ಕೆ ಹಾನಿಯಾಗಿರುವುದು
ಪಡುಬಿದ್ರಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ತಾಲ್ಲೂಕಿನ ಕೆಲವು ಮನೆಗಳಿಗೆ ಹಾನಿಯಾಗಿದೆ.
ಮಜೂರು ಗ್ರಾಮದ ಅಪ್ಪಿ ನಾಯಕ್ ಅವರ ಮನೆಗೆ ಮರ ಬಿದ್ದು ₹25 ಸಾವಿರ, ಕಳತ್ತೂರು ಗ್ರಾಮದ ಶ್ರೀನಿವಾಸ ಶೆಟ್ಟಿಗಾರ್ ಅವರ ಮನೆಗೆ ಹಾನಿ ಸಂಭವಿಸಿ ₹20 ಸಾವಿರ, ನಡ್ಸಾಲು ಗ್ರಾಮದ ಉನೈಝಾ ಬಾನು ಅವರ ಮನೆಗೆ ಮರ ಬಿದ್ದು ₹10 ಸಾವಿರ ನಷ್ಟ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ವೇಳೆ ನೆಲಸಮವಾಗಿದ್ದ ಬಾವಿ ಬಾಯ್ದೆರೆದು ಭಾರಿ ಗಾತ್ರದ ಹೊಂಡ ಕಾಣಿಸಿಕೊಂಡಿದ್ದು, ಭಾನುವಾರ ಸಂಜೆ ಹೆದ್ದಾರಿ ಇಲಾಖೆ ಗುತ್ತಿಗೆದಾರರು ಡಾಂಬಾರು ಮಿಶ್ರಿತ ಉಸುಕು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಕಡಲು ಪ್ರಕ್ಷುಬ್ಧ: ಕರಾವಳಿ ತೀರದಲ್ಲಿ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಮೂಳೂರು, ಉಚ್ಚಿಲ, ಕಾಪುವಿನಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸ್ಥಳೀಯ ಮೀನುಗಾರರು ಕಡಲ ತಡಿಗೆ ತೆರಳುತಿಲ್ಲ. ಆದರೆ ಇಲ್ಲಿಗೆ ಬರುವ ದೂರದ ಪ್ರವಾಸಿಗರು ಕಡಲಿನಲ್ಲಿ ಈಜಲು ಮುಂದಾಗುತ್ತಿದ್ದಾರೆ. ಸ್ಥಳೀಯರು ಕಡಲ ಪ್ರಕ್ಷುಬ್ಧತೆ, ಈ ಮೊದಲು ಸಂಭವಿಸಿರುವ ಘಟನೆಗಳನ್ನು ವಿವರಿಸಿ ವಾಪಾಸ್ ಕಳುಹಿಸುತ್ತಿದ್ದಾರೆ.
ತುಂಬಿ ಹರಿದ ನದಿಗಳು
ಕುಂದಾಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಕೊಂಡಿದೆ. ನಿರೀಕ್ಷೆಗಿಂತ ಮೊದಲೇ ಮಳೆರಾಯನ ಆಗಮನದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಇಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾನುವಾರ ನಡೆದ ಹಲವು ಶುಭ ಕಾರ್ಯಕ್ರಮಗಳಿಗೂ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆಯಿಂದ ತಾಪತ್ರಯವಾಗಿತ್ತು. ವಿದ್ಯುತ್ ಹಾಗೂ ದೂರವಾಣಿ ವ್ಯವಸ್ಥೆಯಲ್ಲೂ ಅಡಚಣೆ ಉಂಟಾಗಿತ್ತು.
ಸಂಜೆಯ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಮಳೆ ಕಡಿಮೆಯಾಗಿಲ್ಲ. ತಾಲ್ಲೂಕಿನ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.