ಹೆಬ್ರಿ: ‘ವಿವಿಧ ಧರ್ಮದ ಆಚರಣೆಗಳು ಬೇರೆಯಾದರೂ ಉದ್ದೇಶ ಒಂದೇ ಜಗತ್ತಿಗೆ ಒಳಿತು ಮಾಡುವ ಬೆಳಕು ನೀಡುವುದು. ಮುದ್ರಾಡಿ ಶ್ರೀಕ್ಷೇತ್ರವು ಅಂತಹ ಮಹತ್ವದ ಕಾರ್ಯವನ್ನು ನಡೆಸುತ್ತಿದೆ. ಮುದ್ರಾಡಿ ಕ್ಷೇತ್ರಕ್ಕೆ ಅದ್ಭುತ ಶಕ್ತಿಯಿದೆ, ಧರ್ಮಯೋಗಿ ಮತ್ತು ಕರ್ಮಯೋಗಿಯಾಗಿದ್ದ ಮೋಹನ್ ಶ್ರೀಗಳಿಂದ ಕ್ಷೇತ್ರವು ಬೆಳಗುತ್ತಿದೆ’ ಎಂದು ಗೌರಿಗದ್ದೆಯ ಶ್ರೀವಿನಯ್ ಗುರೂಜಿ ಹೇಳಿದರು.
ಹೆಬ್ರಿಯ ಶ್ರೀಕ್ಷೇತ್ರ ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಧರ್ಮಯೋಗಿ ಮೋಹನ್ ಶ್ರೀಗಳ 4ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಧರ್ಮಯೋಗಿ ಸಮ್ಮಾನ್ ಸ್ವೀಕರಿಸಿ ಅವರು ಮಾತನಾಡಿದರು.
ತುಳುನಾಡಿನಲ್ಲಿ ನಾಗಾರಾಧನೆ ಮತ್ತು ದೈವಾರಾಧನೆಯ ಮೂಲಕ ಒಗ್ಗಟ್ಟು ಇದೆ. ಅದು ಸದೃಢ ಕುಟುಂಬದ ವ್ಯವಸ್ಥೆಗೆ ಕಾರಣವಾಗಿದೆ. ಆಮೂಲಕ ಸಂಘಟಿತ ಸಮಾಜ ನಿರ್ಮಾಣವಾಗಿದೆ ಎಂದು ವಿನಯ ಗುರೂಜಿ ಹೇಳಿದರು.
ಮುಖಂಡ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ಸರ್ವ ಧರ್ಮದವರೂ ಬಂದು ಸೇವೆ ಸಲ್ಲಿಸುವ ಕ್ಷೇತ್ರ ಮುದ್ರಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ ಬಜಗೋಳಿ ರವೀಂದ್ರ ಶೆಟ್ಟಿ ಮಾತನಾಡಿ, ‘ಮುದ್ರಾಡಿ ಕ್ಷೇತ್ರವನ್ನು ಬೆಳಗಿಸಿದ ಧರ್ಮಯೋಗಿ ಮೋಹನ್ ಸ್ವಾಮೀಜಿ ಸಮಾಜದ ದೊಡ್ಡಶಕ್ತಿ, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕ್ಷೇತ್ರದ ಸೇವೆ ಮಾಡಲು ನನಗೂ ಅವಕಾಶ ದೊರೆತಿರುವುದು ಪುಣ್ಯ’ ಎಂದರು.
ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಧರ್ಮಯೋಗಿ ಮೋಹನ್ ಶ್ರೀಗಳ 4ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.
ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ಅಂಗದ ಸಂಧಾನ ನಡೆಯಿತು. ಕಲಾವಿದರಾದ ಉಜಿರೆ ಅಶೋಕ ಭಟ್ ಮತ್ತು ಗಣೇಶ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಿದ್ದರು.
ಶ್ರೀವಿನಯ್ ಗುರೂಜಿ ಅವರಿಗೆ ಪ್ರದಾನ ಮಾಡಿದ ‘ಧರ್ಮಯೋಗಿ ಸಮ್ಮಾನ್’ವನ್ನು ಶ್ರೀಕ್ಷೇತ್ರ ಮುದ್ರಾಡಿಯನ್ನು ಬೆಳಗಿಸಲು ಮೋಹನ್ ಶ್ರೀಗಳ ಜೊತೆ ಶ್ರಮಿಸಿದ ಕಮಲ ಎಂ.ಪಿ ಅವರಿಗೆ ಮರು ಪ್ರದಾನಿಸಿದರು.
ಧಾರ್ಮಿಕ ಮುಖಂಡ ಪ್ರವೀಣ್ ಭಟ್, ಶ್ರೀಕ್ಷೇತ್ರ ಮುದ್ರಾಡಿಯ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ ಮೋಹನ್, ಧರ್ಮದರ್ಶಿಗಳಾದ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ಕಮಲ ಎಂ.ಪಿ. ಇದ್ದರು. ರಂಗ ನಿರ್ದೇಶಕ ಜಗದೀಶ ಜಾಲ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.