ADVERTISEMENT

ಎಚ್‌ಐವಿ ಸೋಂಕು ಇಳಿಮುಖ; ಜಾಗೃತಿಯೇ ಅಸ್ತ್ರ

ಜಿಲ್ಲೆಯ ಶೇ 98ರಷ್ಟು ಜನರಿಗೆ ಏಡ್ಸ್ ರೋಗದ ಅರಿವು: ಡಾ.ಚಿದಾನಂದ ಸಂಜು

ಪ್ರಜಾವಾಣಿ ವಿಶೇಷ
Published 30 ನವೆಂಬರ್ 2019, 15:29 IST
Last Updated 30 ನವೆಂಬರ್ 2019, 15:29 IST
ಸಂಗ್ರಹ
ಸಂಗ್ರಹ   

ಉಡುಪಿ: ಏಡ್ಸ್‌ ರೋಗದ ಕುರಿತು ಸಾರ್ವಜನಿಕರಿಗೆ ನಿರಂತರ ಜಾಗೃತಿ ಮೂಡಿಸಿದ ಫಲವಾಗಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏಡ್ಸ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಏಡ್ಸ್‌ ನಿಯಂತ್ರಣಾ ಘಟಕ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿದ್ದು, ಪ್ರತಿವರ್ಷ ಎಚ್‌ಐವಿ ಸೋಂಕಿತರ ಸಂಖ್ಯೆ ಕುಸಿಯುತ್ತಲೇ ಇದೆ.

ಆರೋಗ್ಯ ಇಲಾಖೆಯ ಅಂಕಿ–ಅಂಶಗಳ ಪ್ರಕಾರ, 2008–09ನೇ ಸಾಲಿನಲ್ಲಿ ಜಿಲ್ಲೆಯಲ್ಲಿ (ಜನರಲ್‌ ಪಾಸಿಟಿವಿಟಿ ಪರೀಕ್ಷೆ) ಎಚ್‌ಐವಿ ಸೋಂಕಿತರ ಪತ್ತೆ ಪ್ರಮಾಣ ಶೇ 7.90ರಷ್ಟಿತ್ತು. ಗರ್ಭಿಣಿಯರಲ್ಲಿ ಸೋಂಕು ಪತ್ತೆ ಪ್ರಮಾಣ ಶೇ 0.54ರಷ್ಟಿತ್ತು. 2018–19ನೇ ಸಾಲಿನಲ್ಲಿ ಸೋಂಕಿತರ ಪ್ರಮಾಣ ಶೇ 0.55ಕ್ಕೆ ಕುಸಿದಿದೆ. ಜತೆಗೆ ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಶೇ 0.03ಕ್ಕೆ ಇಳಿಕೆಯಾಗಿದೆ.

ADVERTISEMENT

ಹುಟ್ಟುವ ಮಗುವಿಗೆ ಸೋಂಕು ತಗುಲಿಲ್ಲ:ಎಚ್ಐವಿ ಪೀಡಿತ ಗರ್ಭಿಣಿಯಿಂದ ಜನಿಸುವ ಮಗುವಿಗೆ ಸೋಂಕು ವರ್ಗಾವಣೆಯಾಗದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ, ಕಳೆದ ಮೂರು ವರ್ಷಗಳಲ್ಲಿ ಎಚ್ಐವಿ ಪೀಡಿತ ಮಹಿಳೆಯಿಂದ ಜನಿಸಿದ ಯಾವ ಮಗುವಿಗೂ ಸೋಂಕು ಹರಡಿಲ್ಲ.

ಇಳಿಕೆಗೆ ಕಾರಣ:ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಎನ್‌ಎಚ್‌ಎಫ್‌ಎಸ್‌ ಸಂಸ್ಥೆಯ ಸರ್ವೆಯ ಪ್ರಕಾರ ಜಿಲ್ಲೆಯಲ್ಲಿ ಶೇ 98ರಷ್ಟು ಜನರಿಗೆ ಏಡ್ಸ್ ರೋಗದ ಕುರಿತು ಅರಿವು ಇರುವುದು ಇದಕ್ಕೆ ಕಾರಣ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು.

ಸೋಂಕು ಹರಡುವಿಕೆಗೆ ತಡೆ:ಬೇರೆ ಜಿಲ್ಲೆಗಳಲ್ಲಿ ಸೋಂಕಿತರು ಅರ್ಧಕ್ಕೆ ಚಿಕಿತ್ಸೆ ನಿಲ್ಲಿಸುತ್ತಿರುವುದರಿಂದ ರೋಗ ವೇಗವಾಗಿ ಹರಡುತ್ತಿದೆ. ಆದರೆ, ಉಡುಪಿಯಲ್ಲಿ ಸೋಂಕಿತರು ನಿರಂತರ ಚಿಕಿತ್ಸೆ ಪಡೆಯುತ್ತಿರುವ ಪರಿಣಾಮ ಮತ್ತೊಬ್ಬರಿಗೆ ರೋಗ ಹರಡುವಿಕೆ ಪ್ರಮಾಣ ಕಡಿಮೆ. ನಿಯಮಿತವಾಗಿ ಔಷಧ ತೆಗೆದುಕೊಳ್ಳುವ ವ್ಯಕ್ತಿ ಲೈಂಗಿಕ ಕ್ರಿಯೆ ನಡೆಸಿದರೂ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುತ್ತಾರೆ ಚಿದಾನಂದ ಸಂಜು.

ನಿರಂತರ ಜಾಗೃತಿಯ ಫಲವಾಗಿ ಜಿಲ್ಲೆಯಲ್ಲಿರುವ ಏಡ್ಸ್‌ ಸೋಂಕಿತರಲ್ಲಿ ಪ್ರಜ್ಞಾವಂತಿಕೆ ಬೆಳೆದಿದೆ. ಮತ್ತೊಬ್ಬರ ಜೀವನ ಹಾಳು ಮಾಡಬೇಕು ಎಂಬ ದುರುದ್ದೇಶದಿಂದ ಲೈಂಗಿಕ ಕ್ರಿಯೆ ನಡೆಸುವವರು ಕಡಿಮೆ ಇದ್ದಾರೆ. ಇದೂ ಕೂಡ ಪ್ರಮುಖ ಕಾರಣ ಎನ್ನುತ್ತಾರೆ ಅವರು‌.

ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆಗೆ ದಾಖಲಾಗುವ ಗರ್ಭಿಣಿಯರಿಗೆ ಕಡ್ಡಾಯ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂದರ್ಭ ಪತಿಗೂ ಪರೀಕ್ಷೆ ನಡೆಸಿ ರೋಗದ ಬಗ್ಗೆ ತಿಳಿ ಹೇಳಲಾಗುತ್ತಿದೆ. ಇದರಿಂದ ಸಮುದಾಯ ಪ್ರಜ್ಞೆ ಜಾಗೃತಿಯಾಗುತ್ತಿದೆ ಎಂದರು.

ಸೋಂಕಿತರಿಗೆ ನೆರವು:ಸೋಂಕಿತರಿಗೆ ಏಕ ಗವಾಕ್ಷಿ ಕೇಂದ್ರದ ಮೂಲಕ ಕಚೇರಿಯಿಂದ ಕಚೇರಿಗೆ ಅಲೆದಾಡಿಸದೆ ಸರ್ಕಾರದ ಸೌಲಭ್ಯಗಳನ್ನು ನೀಡಲಗುತ್ತಿದೆ. ಎಆರ್‌ಟಿ ಕೇಂದ್ರಗಳಿಗೆ ಚಿಕಿತ್ಸೆಗೆ ಬರುವ ಏಡ್ಸ್ ರೋಗಿಗಳಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಅರ್ಜಿ ಸ್ವೀಕರಿಸಿ, ಅವುಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಸವಲತ್ತುಗಳನ್ನು ನೀಡಲಾಗುತ್ತಿದೆ.

ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಾತ್ರ ಏಡ್ಸ್ ರೋಗಿಗಳಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಶೇ 50ರ ರಿಯಾಯಿತಿ ಬಸ್‌ ಪಾಸ್‌ಗಳನ್ನು ವಿತರಿಸಲಾಗುತ್ತಿದ್ದು, 670 ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸೋಂಕಿತ ಮಕ್ಕಳಿಗೆ ಪ್ರೊಟಿನ್ ಪೌಡರ್‌, ವಿಟಮಿನ್ ಯುಕ್ತ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಎಚ್‌ಐವಿ ಸೋಂಕಿತರು

1612–ಪುರುಷರು

1918–ಮಹಿಳೆಯರು

237 ಮಕ್ಕಳು

7– ಲೈಂಗಿಕ ಅಲ್ಪಸಂಖ್ಯಾತರು

3,774– ಒಟ್ಟು ಏಡ್ಸ್ ಸೋಂಕಿತರು

-----------

ಎಚ್‌ಐವಿ ಸೋಂಕಿತರ ವಿವರ

ವರ್ಷ–ಸೋಂಕಿತರು–ಪ್ರಮಾಣ

2010–11–1,021–ಶೇ 5.4

2011–12–818–ಶೇ3.1

2012–13–691–ಶೇ 2.1

2013–14–624–ಶೇ 1.9

2014–15–473–ಶೇ1.5

2015–16–381–ಶೇ1.15

2016–17–366–ಶೇ0.98

2017–18–283–ಶೇ0.53

2018–19–336–ಶೇ0.55

2019–20–143–ಶೇ0.38 (ಅಕ್ಟೋಬರ್‌ವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.