ADVERTISEMENT

ಸಮಗ್ರ ಔಷಧ ಪದ್ಧತಿ ಜನರಿಗೆ ಒಂದೇ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 15:23 IST
Last Updated 1 ಜುಲೈ 2018, 15:23 IST
ಚಿತ್ರ: 1ಉಳ್ಳಾಲ1: ತಲಪಾಡಿ ದೇವಿನಗರದಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆ ಉದ್ಘಾಟನೆಗೊಂಡಿತು. 
ಚಿತ್ರ: 1ಉಳ್ಳಾಲ1: ತಲಪಾಡಿ ದೇವಿನಗರದಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆ ಉದ್ಘಾಟನೆಗೊಂಡಿತು.    

ಉಳ್ಳಾಲ: ‘ಸಮಗ್ರ ಔಷಧ ಪದ್ಧತಿ ಜನರಿಗೆ ಒಂದೇ ಕಡೆ ಸಿಗುವಂತಹ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಇಂತಹ ಕೇಂದ್ರಗಳ ಸ್ಥಾಪನೆಗೆ ಆಯುಷ್ ಸಚಿವಾಲಯ ಹೆಚ್ಚಿನ ಒತ್ತು ನೀಡಲಿದೆ’ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅಭಿಪ್ರಾಯಪಟ್ಟರು.

ತಲಪಾಡಿ ದೇವಿನಗರದಲ್ಲಿ ಭಾನುವಾರ ತುಳುನಾಡು ಎಜುಕೇಶನ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಶಾರದಾ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಆಯುಷ್ ಸಚಿವಾಲಯದಿಂದ ಕಡ್ಡಾಯ ನೀತಿಗಳನ್ನು ಜಾರಿಗೊಳಿಸಲಾಗಿದ್ದು, ಆಯುಷ್ ಸರ್ಕಾರಿ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಸ್ಥಾಪನೆ ಮತ್ತು ಸಿಬ್ಬಂದಿ ಮತ್ತು ಸಿಬ್ಬಂದಿಯೇತರರಿಗೆ ಕಡ್ಡಾಯ ಹಾಜರುವಿಕೆಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಸೇರಿದಂತೆ ಜನರಿಗೆ ಅನುಕೂಲಕರ ಸೇವೆ ಒದಗಿಸುವ ಸಲುವಾಗಿ ಆಧುನಿಕ ಸಲಕರಣೆಗಳ ವ್ಯವಸ್ಥೆಯನ್ನು ಪೂರೈಸಲಾಗಿದೆ . 2018-19 ಸಾಲಿನಲ್ಲಿ ಭಾರತೀಯ ಔಷಧ ಪದ್ಧತಿ (ಆಯುರ್ವೇದ, ಹೋಮಿಯೋಪತಿ, ಯುನಾನಿ) ಕಾಲೇಜು ಪ್ರವೇಶಾತಿಗೆ ನೀಟ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು.

2016 ರಲ್ಲಿ ಆರಂಭಗೊಂಡ ಶಾರದಾ ಆಯುರ್ವೇದ ಆಸ್ಪತ್ರೆ ಇದೀಗ 200 ಬೆಡ್ ಗಳನ್ನು ಒಳಗೊಂಡು ಆಧುನಿಕ ಶೈಲಿಯ ಚಿಕಿತ್ಸಾ ಪದ್ಧತಿಯಾಗಿರುವ ಪಂಚಕರ್ಮ ಚಿಕಿತ್ಸೆ, ಯೋಗ, ಪ್ರತ್ಯಾಹಾರ, ರೋಗ ಗುರುತಿಸುವ , ಫಿಸಿಯೊಥೆರಪಿ ಕೇಂದ್ರಗಳನ್ನು ಒಳಗೊಂಡು ಸುಸಜ್ಜಿತವಾಗಿ ಆರಂಭಗೊಂಡಿದ. ಗುಣಪಡಿಸಲಾಗದ ರೋಗಗಳಿಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾದ ಚಿಕಿತ್ಸೆ. ಅಮೆರಿಕ, ಯುರೋಪ್ ದೇಶಗಳಲ್ಲಿಯೂ ಕ್ರಾಂತಿಯನ್ನು ಮಾಡುತ್ತಿದೆ. ಆಯುರ್ವೇದ ಕುರಿತು ವಿಶ್ವದಾದ್ಯಂತ ಬೇಡಿಕೆಯಿದ್ದರೂ, ತರಬೇತಿಯಲ್ಲಿನ ಆಸಕ್ತಿ ಕಡಿಮೆಯಿದೆ. ಈ ಕುರಿತು ಸಮಾಜ ಎಚ್ಚೆತ್ತು ಜಾಗೃತಿಯನ್ನು ಮೂಡಿಸುವುದರ ಜೊತೆಗೆ ವೈಜ್ಞಾನಿಕ ಯುಗದಲ್ಲಿಯೂ ಸವಾಲಾಗಿ ಸ್ವೀಕರಿಸಬೇಕಿದೆ ಎಂದರು. ಶಿಕ್ಷಣದೊಂದಿಗೆ ಶಾರದಾ ಸಂಸ್ಥೆ ಅಪರೂಪದ ಆಯುರ್ವೇದ ಆಸ್ಪತ್ರೆ ಆರಂಭಿಸಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಯಾವುದೇ ಚಿಕಿತ್ಸೆಯಿಂದ ಆಗದ ಲಾಭ ಆಯುರ್ವೇದ ಚಿಕಿತ್ಸೆಯಿಂದ ಸಾಧ್ಯವಿದೆ. ಈ ವಿಷಯದಲ್ಲಿ ನಿರಂತರ ಸಂಶೋಧನೆ ನಡೆಯಬೇಕು. ಸಂಸ್ಕೃತ ಭಾಷೆಗೆ ವಿನಾಶವಿಲ್ಲ, ಉಳಿಸಿ ಬೆಳೆಸು ಪ್ರಯತ್ನವೂ ನಡೆಯಬೇಕು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ADVERTISEMENT

ಸಚಿವ ಯು.ಟಿ.ಖಾದರ್ ಮಾತನಾಡಿ, ‘ಆಯುರ್ವೇದ ನಮ್ಮ ದೇಶದ ಋಷಿ ಮುನಿಗಳು ವಿಶ್ವಕ್ಕೇ ಕೊಟ್ಟ ಕೊಡುಗೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ರೋಗ ಬಂದಾಗ ಆಯುರ್ವೇದ ಮೊದಲ ಆಯ್ಕೆಯಾಗಬೇಕೇ ಹೊರತು ಕೊನೆಯ ಆಯ್ಕೆ ಆಗಬಾರದು’ ಎಂದು ಹೇಳಿದರು.

ಮನುಷ್ಯನ ಜೀವನ ಪ್ರಕೃತಿ ಜೊತೆ ಹೊಂದಿದ್ದು, ಮನುಷ್ಯನಿಗೆ ಬೇಕಾದ ಔಷಧವೂ ಪ್ರಕೃತಿಯಲ್ಲಿದೆ. ಸ್ತುತ ದಿನಗಳಲ್ಲಿ ಆಯುರ್ವೇದ ಕಾಲೇಜು ಆರಂಭಿಸುವುದು ಅತ್ಯಗತ್ಯ, ಇದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಆಯುರ್ವೇದ ವೈದ್ಯರಿಗೆ ಜರ್ಮನಿಯಲ್ಲಿ ಭಾರೀ ಬೇಡಿಕೆಯಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಇಲ್ಲಿನ ವೈದ್ಯರನ್ನು ಜರ್ಮನಿಗೆ ಕಳುಹಿಸುವ ಒಪ್ಪಂದವನ್ನು ನಡೆಸುವ ಕುರಿತು ಚಿಂತನೆ ನಡೆಸಿದೆ ಎಂದರು.

ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಮತ್ತು ಸೌಲಭ್ಯಗಳ ಮಾಹಿತಿ ಪತ್ರ ಬಿಡುಗಡೆಗೊಳಿಸಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವಾಸುದೇವ ಅಸ್ರಣ್ಣ, ತುಳುನಾಡು ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್, ಉಪಾಧ್ಯಕ್ಷ ಪ್ರೊ.ಕೆ.ಎಸ್.ಕಲ್ಲೂರಾಯ, ಟ್ರಸ್ಟಿ ಎಚ್.ಸೀತಾರಾಮ ಇದ್ದರು.

ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ರವಿ ಗಣೇಶ್ ಸ್ವಾಗತಿಸಿದರು. ತುಳುನಾಡು ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ ವಂದಿಸಿದರು. ಮುಖ್ಯ ಆಡಳಿತಾಧಿಕಾರಿ ವಿವೇಕ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.