ADVERTISEMENT

ಕುಂದಾಪುರ: ಅನುಪಮಾಗೆ ಡಾ.ಎಚ್‌.ಶಾಂತಾರಾಮ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 14:06 IST
Last Updated 3 ಆಗಸ್ಟ್ 2021, 14:06 IST
ಅನುಪಮಾ ಪ್ರಸಾದ್
ಅನುಪಮಾ ಪ್ರಸಾದ್   

ಕುಂದಾಪುರ: ಈ ವರ್ಷದ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಅನುಪಮಾ ಪ್ರಸಾದ್ ಕಾಸರಗೊಡು ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಗೆ ದೊರಕಿದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಕತೆಗಳ ಮೂಲಕ ಪ್ರಸಿದ್ಧರಾಗಿರುವ ಅನುಪಮಾ ಪ್ರಸಾದ್ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಪ್ರಮುಖ ಲೇಖಕರಾದ ಓ.ಎಲ್.ನಾಗಭೂಷಣ ಸ್ವಾಮಿ, ದೇವು ಪತ್ತಾರ್, ಮತ್ತು ನರೇಂದ್ರ ರೈ ದೇರ್ಲ ಅವರು ನಿರ್ಣಾಯಕರಾಗಿದ್ದರು. ಪ್ರಶಸ್ತಿಯು ₹ 15,000 ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಲೇಖಕರ ಪರಿಚಯ: ಉತ್ತರ ಕನ್ನಡ ಜಿಲ್ಲೆಯವರಾದ ಅನುಪಮಾ ಪ್ರಸಾದ್ ದಕ್ಷಿಣ ಕನ್ನಡದ ಉಜಿರೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಗಡಿನಾಡು ಕಾಸರಗೋಡಿನಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.

ADVERTISEMENT

ಚೇತನಾ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ ಇವರ ಕಥಾ ಸಂಕಲನಗಳು. ಎಂ. ವ್ಯಾಸರ ಕುರಿತಾದ ಅರ್ಧ ಕಥಾನಕ’ ಇವರ ನಿರೂಪಣಾ ಕೃತಿ. ಕಿರುನಾಟಕಗಳು, ಬಿಡಿ ಕವಿತೆಗಳು ಮತ್ತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ಪಕ್ಕಿಹಳ್ಳದ ಹಾದಿಗುಂಟ ಇವರ ಮೊದಲ ಕಾದಂಬರಿ.

ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಅತ್ಯತ್ತಮ ಕಥಾಸಂಕಲನ ಜೋಗತಿ ಜೋಳಿಗೆ ಕೃತಿಗೆ 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರಾವಳಿ ಲೇಖಕಿಯರ ಸಂಘದ ‘ಸಾರಾ ಅಬೂಬಕರ್’ ಪ್ರಶಸ್ತಿ ಮತ್ತು ಅಡ್ವೈಸರ್ ಪ್ರಶಸ್ತಿ ಸಂದಿದೆ.

ದೂರತೀರ ಕೃತಿಗೆ 2012ನೇ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ‘ವಸುದೈವ ಭೂಪಾಲಂ’ ಕಥಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ‘ತ್ರಿವೇಣಿ’ ಪುರಸ್ಕಾರ ದೊರೆತಿದೆ. ಕರವೀರದ ಗಿಡ ಕೃತಿಗೆ 2010ನೇ ಸಾಲಿನ ಬೇಂದ್ರೆ ಗ್ರಂಥ ಬಹುಮಾನ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.