ADVERTISEMENT

ಮಸೀದಿ ಒಡೆಯಬೇಡಿ ಎಂದಿದ್ದೆ, ಕೇಳಲಿಲ್ಲ: ಪೇಜಾವರ ಶ್ರೀಗಳು

ಮಸೀದಿ ಧ್ವಂಸ ಘಟನೆಯನ್ನು ಹಿಂದೆ ಸ್ಮರಿಸಿದ್ದ ಪೇಜಾವರ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 19:30 IST
Last Updated 30 ಸೆಪ್ಟೆಂಬರ್ 2020, 19:30 IST
ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ   

ಉಡುಪಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಸಹ ಸ್ಥಳದಲ್ಲಿದ್ದರು. ಕರಸೇವೆ ಮಾಡಲು ಸಾಧು–ಸಂತರ ಜತೆ ಅಯೋಧ್ಯೆಗೆ ತೆರಳಿದ್ದ ಸಂದರ್ಭ ನಡೆದ ಮಸೀದಿ ಧ್ವಂಸ ಘಟನೆಯನ್ನು, ಅಯೋಧ್ಯೆ ರಾಮಮಂದಿರ ತೀರ್ಪು ಪ್ರಕಟವಾದ ದಿನ (ನ.9, 2019) ಪೇಜಾವರ ಶ್ರೀಗಳು ಮೆಲುಕು ಹಾಕಿದ್ದರು.

ಪೇಜಾವರ ಶ್ರೀಗಳು ಹೇಳಿದ್ದು..:

‘ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಅಯೋಧ್ಯೆ ಹೋರಾಟ ತೀವ್ರ ಸ್ವರೂಪ ಪಡೆದು 10 ಜನರ ಹತ್ಯೆ ನಡೆದಿತ್ತು. ಅಂದಿನ ಹೋರಾಟದಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ವಿದ್ಯಮಾನ್ಯ ತೀರ್ಥರು, ವಿಭುದೇಶ ತೀರ್ಥರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀಗಳನ್ನು ಬಂಧಿಸಿ ಪ್ರತಾಪಘಡದಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು.

ADVERTISEMENT

ಅಲ್ಲಿಂದ ಬಿಡುಗಡೆಯಾದ ಬಳಿಕ ಸುಬ್ರಹ್ಮಣ್ಯ ಮಠದ ಶ್ರೀಗಳೊಂದಿಗೆ ಅಯೋಧ್ಯೆಗೆ ತೆರಳುವಾಗ ಅಲಹಾಬಾದ್‌ನಲ್ಲಿ ಬಂಧಿಸಿ ಮತ್ತೆ ಗೃಹ ಬಂಧನದಲ್ಲಿ ಇರಿಸಲಾಯಿತು. ಬಿಡುಗಡೆ ಕೋರಿ ನ್ಯಾಯಾಲಯ ಹಾಗೂ ಅಂದಿನ ರಾಷ್ಟ್ರಪತಿಯಾಗಿದ್ದ ವೆಂಕಟರಾಮನ್ ಅವರಿಗೆ ಅರ್ಜಿ ಸಲ್ಲಿಸಿದ್ದೆವು. ಬಿಡುಗಡೆಗೆ ಆದೇಶ ಬಂದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಮಾಡಿ ಉಡುಪಿಗೆ ಮರಳಿದ್ದೆವು.

ಬಳಿಕ, ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಅಯೋಧ್ಯೆಯಲ್ಲಿ ಕರಸೇವೆಗೆ ಒತ್ತಾಯಿಸಿ ಹಲವು ಸಂಧಾನ ಸಭೆಗಳು ನಡೆದವು. ಆದರೆ, ಫಲಕಾರಿಯಾಗಲಿಲ್ಲ. ನಂತರ ಪಿ.ವಿ.ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ, ಮಸೀದಿಯನ್ನು ಮುಟ್ಟದೆ ಕರಸೇವೆ ಮಾಡಲು ಅನುಮತಿ ದೊರೆಯಿತು.

ಆದರೆ, ಕರಸೇವೆ ಮಾಡುವಾಗ ಅನಿರೀಕ್ಷಿತವಾಗಿ ನಡೆಯಬಾರದ ಘಟನೆ ನಡೆದುಹೋಯಿತು. ಕರ ಸೇವಕರು ಏಕಾಏಕಿ ಮಸೀದಿ ಒಡೆಯಲು ಆರಂಭಿಸಿದರು. ಮಸೀದಿ ಒಡೆಯುವುದು ನಮ್ಮ ನಿರ್ಣಯಕ್ಕೆ ವಿರುದ್ಧ, ಒಡೆಯಬೇಡಿ ಎಂದು ಮೈಕ್‌ನಲ್ಲಿ ಮನವಿ ಮಾಡಿದರೂ ಕೇಳಲಿಲ್ಲ. ತಡೆಯಲು ಮುಂದಾದಾಗ ಗುಂಡು ತಗುಲಬಹುದು ಎಂದು ನನ್ನನ್ನು ತಡೆದರು.

ಮರುದಿನ ಮಸೀದಿ ಧ್ವಂಸವಾದ ಜಾಗದಲ್ಲಿ ರಾಮ ಮಂದಿರವಿದ್ದ ಕುರುಹುಗಳು ಸಿಕ್ಕವು. ಮಸೀದಿಯ ಜಾಗದಲ್ಲಿ ಖುದ್ದು ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದೆ. ಮಸೀದಿ ಧ್ವಂಸ ಕೃತ್ಯದಿಂದ ದೂರ ಉಳಿದಿದ್ದೆ’ ಎಂದು ಪೇಜಾವರ ಸ್ವಾಮೀಜಿ ಅಂದಿನ ಘಟನೆಯನ್ನು ಸ್ಮರಿಸಿದ್ದರು.

ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಡಿ.29, 2019ರಂದು ಕೃಷ್ಣೈಕ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.