ADVERTISEMENT

ಥೈರಾಯ್ಡ್‌ ಹೆಚ್ಚಾದರೂ, ಕಡಿಮೆಯಾದರೂ ಅಪಾಯ

ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಯಲ್ಲಿ ವಿಶ್ವ ಥೈರಾಯ್ಡ್ ದಿನಾಚರಣೆ, ಉಚಿತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 16:16 IST
Last Updated 26 ಮೇ 2022, 16:16 IST
ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವ ಶಾಸ್ತ್ರ ವಿಭಾಗ ಗುರುವಾರ ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಮತ್ತು ಉಚಿತ ಥೈರಾಯ್ಡ್ ಪರೀಕ್ಷೆ ಕಾರ್ಯಕ್ರಮದಲ್ಲಿ ಕೆಎಂಸಿ ಡೀನ್ ಡಾ. ಶರತ್ ಕೆ.ರಾವ್ ಮಾತನಾಡಿದರು.
ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವ ಶಾಸ್ತ್ರ ವಿಭಾಗ ಗುರುವಾರ ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಮತ್ತು ಉಚಿತ ಥೈರಾಯ್ಡ್ ಪರೀಕ್ಷೆ ಕಾರ್ಯಕ್ರಮದಲ್ಲಿ ಕೆಎಂಸಿ ಡೀನ್ ಡಾ. ಶರತ್ ಕೆ.ರಾವ್ ಮಾತನಾಡಿದರು.   

ಉಡುಪಿ: ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವ ಶಾಸ್ತ್ರ (ಎಂಡೋಕ್ರಿನೊಲೊಜಿ) ವಿಭಾಗವು ವಿಶ್ವ ಥೈರಾಯ್ಡ್ ದಿನದ ಅಂಗವಾಗಿ ಗುರುವಾರ ವಿಶ್ವ ಥೈರಾಯ್ಡ್ ಜಾಗೃತಿ ಮತ್ತು ಉಚಿತ ಥೈರಾಯ್ಡ್ ಸ್ಕ್ರೀನಿಂಗ್ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಂಸಿ ಡೀನ್ ಡಾ. ಶರತ್ ಕೆ.ರಾವ್ ‘ಥೈರಾಯ್ಡ್ ಉತ್ಪಾದಿಸುವ ಹಾರ್ಮೋನ್ ದೇಹದ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಹಾರ್ಮೋನ್ ಅಂಶ ಹೆಚ್ಚಾದರೂ ತೊಂದರೆ, ಕಡಿಮೆಯಾದರೂ ತೊಂದರೆ. ಯಾವಾಗಲೂ ಥೈರಾಯ್ಡ್‌ ಸಮತೋಲನದಲ್ಲಿರಬೇಕು. ಹಾಗಾಗಿ ವರ್ಷಕೊಮ್ಮೆಯಾದರೂ ಥೈರಾಯ್ಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮಸ್ಯೆ ಕಂಡುಬಂದರೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ ಶೆಟ್ಟಿ ಮಾತನಾಡಿ, ‘ಭಾರತದಲ್ಲಿ ಹತ್ತು ಜನರಲ್ಲಿ ಒಬ್ಬರಿಗೆ ಥೈರಾಯ್ಡ್‌ ತೊಂದರೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಥೈರಾಯ್ಡ್‌ ಸಮಸ್ಯೆ ಇರುವುದು ಗೊತ್ತಾಗುವುದಿಲ್ಲ. ಸಮಸ್ಯೆ ಕಾಣಿಸಿಕೊಂಡ ನಂತರ ಪರೀಕ್ಷೆಗಳಿಂದ ಅರಿವಿಗೆ ಬರುತ್ತದೆ.

ADVERTISEMENT

ಸಾರ್ವಜನಿಕರಿಗೆ ಥೈರಾಯ್ಡ್‌ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಆರೋಗ್ಯ ದಿನಗಳನ್ನು ಆಚರಿಸಲಾಗುತ್ತಿದೆ. ಯಾವುದೇ ಕಾಯಿಲೆಯಾದರೂ ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಕಾಯಿಲೆಯಿಂದ ಗುಣಮುಖರಾಗಲು ಸಾದ್ಯವಿದೆ. ಡಾ.ಸಹನಾ ಶೆಟ್ಟಿ ನೇತೃತ್ವದ ಅಂತಃಸ್ರಾವ ಶಾಸ್ತ್ರ ವಿಭಾಗದಿಂದ ಉಚಿತವಾಗಿ ಥೈರಾಯ್ಡ್ ಪರೀಕ್ಷೆ ಮತ್ತು ಕಾಯಿಲೆಯ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದರು.

ಅಂತಃಸ್ರಾವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಕಾರ್ಯಕ್ರಮದ ಕುರಿತು ಅವಲೋಕನ ನೀಡಿ ಥೈರಾಯ್ಡ್ ಕಾಯಿಲೆ ಮತ್ತು ಚಿಕಿತ್ಸಾ ಕ್ರಮದ ಕುರಿತು ವಿವರ ನೀಡಿದರು. ಸಾವಿರಕ್ಕೂ ಹೆಚ್ಚು ಮಂದಿ ಉಚಿತ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಂಡರು.

ಥೈರಾಯ್ಡ್ ದಿನ ಮಹತ್ವ:

ಪ್ರತಿವರ್ಷ ಮೇ 25ರಂದು ವಿಶ್ವ ಥೈರಾಯ್ಡ್ ದಿನ ಹಾಗೂ ಮೇ 22ರಿಂದ ಮೇ 28ರವರೆಗೆ ಅಂತರ ರಾಷ್ಟ್ರೀಯ ಥೈರಾಯ್ಡ್ ಜಾಗೃತಿ ವಾರ ಆಚರಿಸಲಾಗುತ್ತದೆ. ‘ಇದು ನೀನಲ್ಲ. ಇದು ನಿನ್ನ ಥೈರಾಯ್ಡ್’ ಎಂಬುದು ಈ ವರ್ಷದ ಥೈರಾಯ್ಡ್ ಜಾಗೃತಿ ಸಪ್ತಾಹದ ವಿಷಯವಾಗಿದೆ. ವಿಶ್ವ ಥೈರಾಯ್ಡ್ ದಿನದಂದು ಥೈರಾಯ್ಡ್ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಮುಖ್ಯ ಗುರಿ. ಸಕಾಲಿಕ ರೋಗನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಇದರಿಂದ ಸಾದ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.