ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಸ್ಥಳದಲ್ಲಿ ಬಂಡೆ ಒಡೆಯುವ ಕಾರ್ಯ ನಡೆದಿದೆ
ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ, ಸಂತೆಕಟ್ಟೆ ಅಂಡರ್ ಪಾಸ್ ಈ ಎರಡು ಹೆಸರುಗಳನ್ನು ಕೇಳಿದರೆ ಉಡುಪಿಯ ಜನ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ. ಸಾರ್ವಜನಿಕರನ್ನು ಅಷ್ಟಕ್ಕೂ ಹೈರಾಣು ಮಾಡಿರುವ ಈ ಹೆದ್ದಾರಿ ಕಾಮಗಾರಿಗಳು ಇನ್ನೊಂದು ಮಳೆಗಾಲ ಹತ್ತಿರವಾದರೂ ಇನ್ನೂ ದಡಮುಟ್ಟಿಲ್ಲ.
ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಈಚೆಗೆ ಚುರುಕುಗೊಂಡರೂ ಯಾವಾಗ ಮುಗಿಯುತ್ತದೆ ಎಂಬ ಸ್ಪಷ್ಟ ಉತ್ತರ ಯಾರಲ್ಲೂ ಸಿಗುತ್ತಿಲ್ಲ ಎನ್ನುತ್ತಾರೆ ಜನರು. ಸದ್ಯಕ್ಕೆ ಇಲ್ಲಿ ಎರಡೂ ಬದಿಯ ಸರ್ವಿಸ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಜನರಿಗೆ ಅಲ್ಪಮಟ್ಟಿಗೆ ನೆಮ್ಮದಿ ತಂದಿದೆ.
ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಡರ್‌ಪಾಸ್ ಕಾಮಗಾರಿಗಾಗಿ ರಸ್ತೆ ಅಗೆಯುವಾಗ ಬೃಹತ್ ಬಂಡೆಗಲ್ಲುಗಳು ಒಂದರ ಹಿಂದೆ ಒಂದರಂತೆ ಸಿಗುತ್ತಿರುವುದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣವೆನ್ನುವುದು ಸಂಬಂಧಪಟ್ಟವರ ಅಭಿಪ್ರಾಯವಾಗಿದೆ.
ಕಳೆದ ಮಳೆಗಾಲದಲ್ಲಿ ಸಂತೆಕಟ್ಟೆ ಕೆಸರುಮಯ ರಸ್ತೆಯ ಹೊಂಡಗಳಲ್ಲಿ ತೆವಳಿಕೊಂಡು ಹೋಗುವ ಸ್ಥಿತಿ ವಾಹನ ಸವಾರರಿಗೆ ಉಂಟಾಗಿತ್ತು. ಅಲ್ಲದೆ ಶಾಲಾ ಸಮಯಗಳಲ್ಲಿ ಸಂಚಾರ ದಟ್ಟಣೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ಬವಣೆ ಅನುಭವಿಸಿದ್ದರು. ಮುಂದಿನ ಮಳೆಗಾಲಕ್ಕೆ ಮೊದಲಾದರೂ ಈ ಕಾಮಗಾರಿ ಪೂರ್ಣಗೊಂಡರೆ ಸಾಕಿತ್ತು ಎನ್ನುತ್ತಾರೆ ಜನರು.
ಸುಮಾರು ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಆಮೆಗತಿಯಲ್ಲೇ ಮುಂದುವರಿದೆ. ಜಿಲ್ಲಾಡಳಿತವು ಎಷ್ಟು ಬಾರಿ ಗಡುವು ನೀಡಿದರೂ ಕಾಮಗಾರಿ ಮಾತ್ರ ಚುರುಕುಗೊಂಡಿಲ್ಲ.
ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕೆಂದು ಮುಚ್ಚಳಿಕೆ ಬರೆಸಿಕೊಂಡರೂ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡುತ್ತೇವೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಾಗಿ ದಿನನಿತ್ಯ ಉಡುಪಿಯಿಂದ ಮಣಿಪಾಲಕ್ಕೆ ಓಡಾಡುವವರಿಗೆ ಉಂಟಾಗಿರುವ ಕಷ್ಟ ಅಷ್ಟಿಷ್ಟಲ್ಲ. ಎಂಜಿಎಂ ಕಾಲೇಜಿನಿಂದ ಮುಂದಕ್ಕೆ ಕಿರಿದಾದ ರಸ್ತೆಯಲ್ಲೇ ಎರಡೂ ಬದಿಯಿಂದಲೂ ವಾಹನಗಳು ಸಂಚಾರ ನಡೆಸಬೇಕಾಗಿರುವುದರಿಂದ ಹಲವು ಅಪಘಾತಗಳು ನಡೆದಿವೆ. ಕೆಲ ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು.
ಎಷ್ಟು ಅಪಘಾತಗಳು ನಡೆದರೂ, ಜನರು ನಿತ್ಯ ನರಕಯಾತನೆ ಅನುಭವಿಸಿದರೂ ಸಂಬಂಧಪಟ್ಟವರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ನಗರವಾಸಿಗಳು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 10ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಎಂಜಿನಿಯರ್‌ಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಈ ಹಿಂದೆ ಸೂಚನೆ ನೀಡಿತ್ತು. ಆದರೆ ಈ ಸೂಚನೆ ಮಾತ್ರ ಪಾಲನೆಯಾಗಿಲ್ಲ.
ಕಬ್ಬಿಣದ ಸೇತುವೆ ಜೋಡಣೆ ಕಾಮಗಾರಿಗಾಗಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕಾರ್ಮಿಕರನ್ನು ನಿಯೋಜಿಸಿ ಶೀಘ್ರ ಪೂರ್ಣಗೊಳಿಸಬೇಕೆಂದು ಜಿಲ್ಲಾಡಳಿತ ಸೂಚಿಸಿತ್ತಾದರೂ ಬೆರಳೆಣಿಕೆಯಷ್ಟು ಕಾರ್ಮಿಕರು ಮಾತ್ರ ಈ ಮೇಲ್ಸೇತುವೆಯ ಕಾಮಗಾರಿ ಸ್ಥಳದಲ್ಲಿ ಕಂಡು ಬರುತ್ತಿದ್ದಾರೆ ಎನ್ನುವುದು ಜನರ ಆರೋಪವಾಗಿದೆ.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಮತ್ತು ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿಗಳು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂಬುದು ಅಧಿಕೃತರ ಉತ್ತರವಾಗಿದೆ. ಅದು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದು ಜನರ ಪ್ರಶ್ನೆಯಾಗಿದೆ.
‘ಮಾರ್ಚ್ ಅಂತ್ಯದೊಳಗೆ ಮುಗಿಯಲಿದೆ’
ಸಂತೆಕಟ್ಟೆ ಅಂಡರ್‌ಪಾಸ್ ಮತ್ತು ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಮುಗಿಸುತ್ತೇವೆ ಎಂದು ಅವರೇ ಹೇಳಿದ್ದಾರೆ. ಮುಂದಿನ ವಾರ ಈ ಕುರಿತು ಮತ್ತೆ ಸಭೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು. ಇಂದ್ರಾಳಿಯಲ್ಲಿ ಕಬ್ಬಿಣದ ಸೇತುವೆ ಸಿದ್ಧಗೊಂಡಿದೆ. ಅದನ್ನು ಕೂರಿಸಲು 750ರಷ್ಟು ಕ್ರಿಬ್ಸ್‌ಗಳು ಬೇಕಂತೆ. ಅದನ್ನು ಬೇರೆ ಬೇರೆ ಸ್ಥಳಗಳಿಂದ ತರಬೇಕಾಗಿದೆ. ಈಗ ಕೇರಳದಿಂದ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
‘ಹುಬ್ಬಳ್ಳಿಯಿಂದ ಕ್ರಿಬ್ಸ್ ತರಿಸಿಕೊಟ್ಟಿದ್ದೇನೆ’
ಸಂತೆಕಟ್ಟೆಯಲ್ಲಿ ಕಾಮಗಾರಿ ನಡೆಸುವಾಗ ಬಂಡೆಗಲ್ಲುಗಳು ಸಿಗುತ್ತಿವೆ. ಅವುಗಳನ್ನು ಸ್ಫೋಟಕ ಬಳಸಿ ಒಡೆಯದಂತೆ ಸ್ಥಳೀಯರು ತಡೆಯಾಜ್ಞೆ ತಂದಿದ್ದಾರೆ ಈ ಕಾರಣಕ್ಕೆ ಕೈಯಲ್ಲಿ ಡ್ರಿಲ್ ಮಾಡಿ ಒಡೆಯಬೇಕಾಗಿದೆ ಇದು ಕೂಡ ವಿಳಂಬವಾಗಲು ಕಾರಣವಾಗಿದೆ. ಅಲ್ಲಿ ಇನ್ನೊಂದು ಬದಿಯ ತಡೆಗೋಡೆ ಶೀಘ್ರ ನಿರ್ಮಾಣವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಸಂತೆಕಟ್ಟೆಯಲ್ಲಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ಬದಲಾಯಿಸುವ ಬಗ್ಗೆ ಕೂಡ ಚಿಂತನೆ ನಡೆಸಿದ್ದೆವು. ಈ ಹಂತದಲ್ಲಿ ಬದಲಾಯಿಸಿದರೆ ಮತ್ತೆ ಕಾಮಗಾರಿ ಇನ್ನೆರಡು ವರ್ಷ ವಿಳಂಬವಾಗಬಹುದೆಂದು ಬದಲಾಯಿಸಿಲ್ಲ. ಕೇಂದ್ರ ಸಚಿವ ವಿ.ಸೋಮಣ್ಣ ಅವರಲ್ಲಿ ಮಾತನಾಡಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಬೇಕಾದ ಕ್ರಿಬ್ಸ್‌ಗಳನ್ನು ಹುಬ್ಬಳ್ಳಿಯಿಂದ ತರಿಸಿಕೊಟ್ಟಿದ್ದೇನೆ ಎಂದು ಹೇಳಿದರು.
‘ಜನಪರ ಹೋರಾಟ ಅಗತ್ಯವಿದೆ’
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಅನುದಾನ ಕೊರತೆಯಿಂದಲೋ ತಾಂತ್ರಿಕ ಕಾಣಗಳಿಂದಲೋ ಅಥವಾ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲವೊ ಎಂಬುದಕ್ಕೆ ಉತ್ತರ ಸಿಗಬೇಕಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಭಾಸ್ಕರ ಶೆಟ್ಟಿ ಹೇಳಿದ್ದಾರೆ. ರೈಲ್ವೆ ಮೇಲ್ಸೇತುವೆಗಾಗಿ ಪಕ್ಷಭೇದ ಮರೆತು ಜನಪರವಾಗಿ ಹೋರಾಟ ನಡೆಸಬೇಕಾದ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿರುವುದನ್ನು ಖಂಡಿಸಿ ಮುಂದಿನ ವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಿದ್ದೇನೆ.ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.