ADVERTISEMENT

ಐಎನ್‌ಎಸ್‌ ಕೊಚ್ಚಿನ್‌ ಮೇಲೆ ಸಂಶಯ: ತನಿಖೆಗೆ ಆಗ್ರಹ

ಮುಂದಿನವಾರ ನಿರ್ಮಲಾ ಸೀತಾರಾಮನ್ ಭೇಟಿ: ಶಾಸಕ ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 3 ಮೇ 2019, 13:08 IST
Last Updated 3 ಮೇ 2019, 13:08 IST
ರಘುಪತಿ ಭಟ್, ಶಾಸಕ
ರಘುಪತಿ ಭಟ್, ಶಾಸಕ   

ಉಡುಪಿ: ಐಎನ್‌ಎಸ್‌ ಕೊಚ್ಚಿನ್ ಹಡಗು ಡಿಕ್ಕಿಹೊಡೆದು ಸುವರ್ಣ ತ್ರಿಭುಜ ಬೋಟ್‌ ಸಮುದ್ರದಲ್ಲಿ ಮುಳುಗಿರುವ ಬಲವಾದ ಸಂಶಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ಶಾಸಕ ರಘುಪತಿ ಭಟ್‌ ಒತ್ತಾಯಿಸಿದರು.

ಮಲ್ಪೆಯ ಮೀನುಗಾರರ ಭವನದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ಇದೊಂದು ಆಕಸ್ಮಿಕ ಅವಘಡವಂತೂ ಅಲ್ಲ. ಸುವರ್ಣ ತ್ರಿಭುಜ ಬೋಟ್‌ನ ಆಕಾರ ಸಂಪೂರ್ಣ ಬದಲಾಗಿದೆ. ಬೋಟ್‌ನ ಬಿಡಿ ಭಾಗಗಳು ಮುರಿದಿವೆ. ನೌಕಾಪಡೆಯ ಹಡಗು ಅಥವಾ ಬೇರೆ ಹಡಗು ಡಿಕ್ಕಿ ಹೊಡೆದಿರುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.‌

ಮುಂದಿನವಾರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಿ, ಪ್ರಕರಣದ ತನಿಖೆ ಮಾಡುವಂತೆ ಒತ್ತಾಯಿಸಲಾಗುವುದು. ಒಂದುವೇಳೆ ಐಎನ್‌ಎಸ್‌ ಕೊಚ್ಚಿನ್‌ ಡಿಕ್ಕಿ ಹೊಡೆದಿರುವುದು ದೃಢಪಟ್ಟರೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಿದ್ದೇವೆ ಎಂದು ರಘುಪತಿ ಭಟ್‌ ತಿಳಿಸಿದರು.

ADVERTISEMENT

7 ಮಂದಿ ಮೀನುಗಾರರು ಬದುಕುಳಿದಿರುವ ಸಾಧ್ಯತೆಗಳು ತೀರಾ ಕಡಿಮೆ. ಹಾಗಾಗಿ, ಮೃತರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಇಲಾಖೆಗೆ ದಾಖಲೆ ರವಾನೆ

ಏ.28ರಂದು ರಾತ್ರಿ ಮಲ್ಪೆಯ ಮೀನುಗಾರ ಮುಖಂಡರು, ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರು ಮಾಜಿ ಕ್ಯಾಪ್ಟನ್‌ ಅವರನ್ನೊಳಗೊಂಡ 10 ಜನರ ತಂಡ ಕಾರವಾರ ನೌಕಾನೆಲೆಯಿಂದ ಐಎನ್‌ಎಸ್‌ ನಿರೀಕ್ಷಕ್‌ ಹಡಗಿನಲ್ಲಿ ಶೋಧ ಕಾರ್ಯಕ್ಕೆ ತೆರಳಿದೆವು. 3 ದಿನ ಸಮುದ್ರದಾಳದಲ್ಲಿ ಸೋನಾರ್ ತಂತ್ರಜ್ಞಾನದ ನೆರವಿನಿಂದ ಕಾರ್ಯಾಚರಣೆ ನಡೆಯಿತು. ಸ್ಥಳೀಯ ಮೀನುಗಾರರ ಶ್ರಮದಿಂದ ಗುರುವಾರ ರಾತ್ರಿ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್‌ ಪ್ರದೇಶದಿಂದ 65 ಕಿ.ಮೀ ದೂರದಲ್ಲಿ ಪತ್ತೆಯಾಯಿತು. ನೌಕಾಪಡೆ ಅಧಿಕಾರಿಗಳು ಬೋಟ್‌ನ ಅವಶೇಷಗಳ ಫೋಟೊಗಳನ್ನು ತೆಗೆದು, ಚಿತ್ರೀಕರಣ ಮಾಡಿದ್ದಾರೆ. ಶೀಘ್ರವೇ ದಾಖಲೆಗಳನ್ನು ಪೊಲೀಸ್ ಇಲಾಖೆಗೆ ಕಳುಹಿಸಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.