ADVERTISEMENT

ಸಿಆರ್‌ಝೆಡ್‌ ನಿಯಮ ಸರಳೀಕರಣಕ್ಕೆ ಒತ್ತಾಯ

ಸಭೆಯಲ್ಲಿ ಸಚಿವರಿಗೆ ಜನಪ್ರತಿನಿಧಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 14:34 IST
Last Updated 1 ಅಕ್ಟೋಬರ್ 2019, 14:34 IST

ಉಡುಪಿ: ಸಿಆರ್‌ಝೆಡ್‌ ಹಾಗೂ ಪರಿಸರ ಸೂಕ್ಷ್ಮ ವಲಯದ ಕಠಿಣ ನಿಯಮಾವಳಿಗಳು ಅಭಿವೃದ್ಧಿಗೆ ಅಡ್ಡಿಯಾಗಿವೆ. ನಿಯಮಗಳ ತಿದ್ದುಪಡಿಯಾಗದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಕಠಿಣ ಸಿಆರ್‌ಝೆಡ್‌ ನಿಯಮಗಳಿಂದ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಸಿಆರ್‌ಝೆಡ್‌ ಇಲಾಖೆಯ ಅಧಿಕಾರಿ, ಹಲವು ಹಂತಗಳಲ್ಲಿ ಸಿಆರ್‌ಝೆಡ್‌ ವ್ಯಾಪ್ತಿ ಬರಲಿದ್ದು, ಜೀವವೈವಿಧ್ಯ, ಪರಿಸರ ಸೂಕ್ಷ್ಮ ಪ್ರದೇಶಗಳು, ಕಡಲ ಕಿನಾರೆಗಳು, ನಗರ ಹಾಗೂ ಗ್ರಾಮೀಣ ಪ್ರದೇಶಗಳು ಬರುತ್ತವೆ. ಈ ಭಾಗಗಳಲ್ಲಿ ನಿರ್ಧಿಷ್ಟ ವ್ಯಾಪ್ತಿಯಲ್ಲಿ ಕಾಮಗಾರಿಗೆ ನಿರ್ಬಂಧವಿದೆ ಎಂದರು.

ADVERTISEMENT

2ನೇ ಹಂತದ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ 200 ಮೀಟರ್‌ವರೆಗೆ ಕಾಮಗಾರಿಗೆ ಹಿಂದೆ ನಿರ್ಬಂಧವಿತ್ತು. ಈಚೆಗೆ ನಿಯಮ ಬದಲಿಸಲಾಗಿದ್ದು, 50 ಮೀಟರ್‌ಗೆ ಇಳಿಸಲಾಗಿದೆ. ಆದರೆ, 2011ರ ಜನಗಣತಿ ಪ್ರಕಾರ ಕಾಮಗಾರಿ ಪ್ರದೇಶದಲ್ಲಿ ಚದರ ಕಿ.ಮೀನಲ್ಲಿ 2,161 ಜನಸಂಖ್ಯೆ ಇರಬೇಕು. ಆಗ ಮಾತ್ರ ನಿಯಮ ಅನ್ವಯವಾಗಲಿದೆ ಎಂದರು.

ಕರಾವಳಿಯ ಟೂರಿಸಂ ಮ್ಯಾಪಿಂಗ್‌ ಮಾಡುವ ಮೊದಲೇ ಜಿಲ್ಲೆಯಲ್ಲಿಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದಾದ ಜಾಗಗಳನ್ನು ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಅಭಿವೃದ್ಧಿ ಕಾಮಗಾರಿಗೆ ಅನುಮತಿ ಸಿಗಲಿದೆ ಎಂದು ಅಧಿಕಾರಿಗಳು ಸಲಹೆ ನೀಡಿದರು.‌

ಜಾಗಗಳನ್ನು ಗುರುತಿಸಿ ಮ್ಯಾಪಿಂಗ್‌ಗೂ ಮೊದಲೇ ಪ್ರಸ್ತಾವ ಸಲ್ಲಿಸಬೇಕು. ನಿಯಮಗಳು ಪ್ರವಾಸೋದ್ಯಮಕ್ಕೆ ಅಡ್ಡಿಯಾಗಬಾರದು ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಹೋಂ ಸ್ಟೇಗಳನ್ನು ತೆರೆಯಲು ಇರುವ ನಿಯಮಗಳನ್ನು ಸರಳೀಕರಣಗೊಳಿಸಬೇಕು, ಕನ್ನಡದಲ್ಲಿ ಡೋರ್‌ ನಂಬರ್ ಬರೆಸುವ ನಿಯಮ ಜಾರಿಗೊಳಿಸಬೇಕು. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಹೆಲಿಟೂರಿಸಂ ಆರಂಭಿಸಬೇಕು ಎಂಬ ಒತ್ತಾಯ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.