ADVERTISEMENT

‘ವರ್ಷಕ್ಕೊಮ್ಮೆ ಮೂತ್ರಪಿಂಡ ತಪಾಸಣೆ ಅಗತ್ಯ’

ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮಣಿಪಾಲದ ಕೆಎಂಸಿಯಲ್ಲಿ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 15:55 IST
Last Updated 9 ಮಾರ್ಚ್ 2023, 15:55 IST
ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಮೂತ್ರಪಿಂಡ ಆರೋಗ್ಯದ ಕುರಿತು ಜಾಗೃತಿ ಹಾಗೂ ಶಿಕ್ಷಣ ಕಾರ್ಯಕ್ರಮ ನಡೆಯಿತು
ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಮೂತ್ರಪಿಂಡ ಆರೋಗ್ಯದ ಕುರಿತು ಜಾಗೃತಿ ಹಾಗೂ ಶಿಕ್ಷಣ ಕಾರ್ಯಕ್ರಮ ನಡೆಯಿತು   

ಉಡುಪಿ: ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಗುರುವಾರ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಮೂತ್ರಪಿಂಡ ಆರೋಗ್ಯದ ಕುರಿತು ಜಾಗೃತಿ ಹಾಗೂ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಣಿಪಾಲ್ ಕಾಲೇಜು ಆಫ್ ಹೆಲ್ತ್ ಪ್ರೊಫೆಷನ್‌ನ ಡೀನ್‌ ಜಿ.ಅರುಣ್ ಮಯ್ಯ, ಮಾತನಾಡಿ ಮೂತ್ರಪಿಂಡದ ಕಾಯಿಲೆಗೆ ಮಧುಮೇಹ ಪ್ರಮುಖ ಕಾರಣವಾಗಿದ್ದು, ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್‌ನಿಂದ ಹೃದ್ರೋಗ ಮತ್ತು ಸ್ಥೂಲ ಕಾಯತೆಯು ಉಂಟಾಗಿ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಮೂತ್ರನಾಳದಲ್ಲಿ ಸಮಸ್ಯೆ ಮತ್ತು ಮೂತ್ರಪಿಂಡದ ವಿವಿಧ ಭಾಗಗಳಲ್ಲಿ ಉರಿಯೂತ ಕಾಣಿಸಿಕೊಂಡರೆ ದೀರ್ಘಾವಧಿಯ ಮೂತ್ರಪಿಂಡ ರೋಗದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ದೇಹದ ಇತರ ಅಂಗಗಳಿಗೂ ತೊಂದರೆ ಉಂಟಾಗಬಹುದು. ಮೂತ್ರಪಿಂಡ ಕಾಯಿಲೆಯ ಸಮಸ್ಯೆಯಿಂದ ಎದುರಾಗಬಹುದಾದ ಗಂಭೀರ ಪರಿಣಾಮವನ್ನು ಹಾಗೂ ಚಿಕಿತ್ಸಾ ಕ್ರಮವನ್ನು ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ತಿಳಿಸಲು ಕೆಎಂಸಿ ಜಾಗೃತಿ ಹಾಗೂ ಶಿಕ್ಷಣ ನೀಡುವ ಕಾರ್ಯಕ್ರಮ ಆಯೋಜಿಸಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ADVERTISEMENT

ಸಾರ್ವಜನಿಕರು ವರ್ಷಕೊಮ್ಮೆಯಾದರೂ ಮೂತ್ರಪಿಂಡ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದಕ್ಕಾಗಿಯೇ ಕೆಎಂಸಿಯಲ್ಲಿ ಮೂತ್ರಪಿಂಡ ಹೆಲ್ತ್ ಚೆಕ್‌ಅಪ್‌ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ ಎಂದರು.

ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಂಕರ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರ ವಿಶ್ವದಾದ್ಯಂತ ವಿಶ್ವ ಮೂತ್ರಪಿಂಡ ದಿನವನ್ನಾಗಿ ಆಚರಿಸಲಾಗುತ್ತದೆ. ಸಾರ್ವಜನಿಕರಿಗೆ ಮೂತ್ರಪಿಂಡ ಆರೋಗ್ಯದ ಕುರಿತು ಅರಿವು ಮತ್ತು ಜಾಗೃತಿ ನೀಡುವುದು ಇದರ ಉದ್ದೇಶ.

ಈ ವರ್ಷದ ಘೋಷ ವಾಕ್ಯ ‘ಅನಿರೀಕ್ಷಿತ ಘಟನೆಗಳಿಗೆ ತಯಾರಿ ಮತ್ತು ದುರ್ಬಲ ಸಮುದಾಯಕ್ಕೆ ಬೆಂಬಲ’ ನೀಡುವುದಾಗಿದೆ. ಕೆಎಂಸಿಯಲ್ಲಿ ಮೂತ್ರಪಿಂಡ ರೋಗಿಗಳಿಗೆ ಮೂತ್ರಪಿಂಡ ಕಸಿ ಸೇರಿದಂತೆ ಅಗತ್ಯ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಿದೆ ಎಂದರು.

ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್‌ ಶೆಟ್ಟಿ ಇದ್ದರು. ಕೆಎಂಸಿ ಡೀನ್ ಡಾ ಪದ್ಮರಾಜ ಹೆಗ್ಡೆ ವಿಶೇಷ ಮೂತ್ರಪಿಂಡ ಹೆಲ್ತ್ ಚೆಕ್ ಪ್ಯಾಕೇಜ್ ಬಿಡುಗಡೆಗೊಳಿಸಿದರು.

ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕರಾದ ಡಾ.ರವೀಂದ್ರ ಪ್ರಭು ಸ್ವಾಗತಿಸಿದರು. ಮಕ್ಕಳ ಮೂತ್ರಪಿಂಡ ತಜ್ಞರಾದ ಡಾ.ದರ್ಶನ್ ರಂಗಸ್ವಾಮಿ ವಂದಿಸಿದರು. ಡಾ.ಶ್ರೀನಿವಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.