ADVERTISEMENT

ಪಡುಬಿದ್ರಿ: ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:14 IST
Last Updated 13 ಜುಲೈ 2025, 4:14 IST
ರಿಯಾಜ್‌
ರಿಯಾಜ್‌   

ಪಡುಬಿದ್ರಿ: ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಕಲಾಯಿ ಹೌಸ್ ನಿವಾಸಿ ಇಬ್ರಾಹಿಂ ಕಲಂದರ್, ಕಾಸರಗೋಡು ಜಿಲ್ಲೆಯ ಕುಂಬಳೆ ಉರ್ಮಿಚಾಲ್ ಬೇಕೂರು ಎಂಬಲ್ಲಿನ ನಿವಾಸಿ ಮಹಮ್ಮದ್ ರಿಯಾಜ್ ಯಾನೆ ಕಡಪ್ಪ ರಿಯಾಜ್ ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆ, ಕೋಟ ಪೊಲೀಸ್ ಠಾಣೆ ಮತ್ತು ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಬಂಧಿತರು ಆರೋಪಿಗಳಾಗಿದ್ದಾರೆ. ಕಳ್ಳತನಕ್ಕೆ ಉಪಯೋಗಿಸಿದ ಕಾರು ಮತ್ತು ₹24 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ADVERTISEMENT

ಘಟನೆ ವಿವರ: ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಬಳಿ ಗಣೇಶ್ ಪ್ರಸಾದ್ ಶೆಟ್ಟಿ ಅವರ ಮನೆಗೆ ಜೂನ್ 22ರಂದು ನುಗ್ಗಿದ್ದ ಆರೋಪಿಗಳು ₹1.20 ಲಕ್ಷ, ₹ 25 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿದ್ದರು. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳತನದ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಯಲ್ಲಿ ಸೆರೆಯಾಗಿತ್ತು.

ಜೈಲಿನಿಂದ ಹೊರಬಂದಿದ್ದ ಆರೋಪಿಗಳು: ಇಬ್ರಾಹಿಂ ಕಲಂದರ್ ಮೇಲೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ, ವಿದ್ಯಾನಗರ, ಮಂಜೇಶ್ವರ, ಮೇಲ್ಪರಂಬ, ಉಡುಪಿ ಜಿಲ್ಲೆಯ ಹೆಬ್ರಿ, ದಕ್ಷಿಣ ಕನ್ನಡದ ವಿಟ್ಲ, ಮೂಡುಬಿದಿರೆ, ಪುತ್ತೂರು ನಗರ, ಗ್ರಾಮಾಂತರ, ಕಡಬ, ಉಪ್ಪಿನಂಗಡಿ, ಬಂಟ್ವಾಳ ಗ್ರಾಮಾಂತರ, ಕೊಡಗು ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. 2025ರ ಫೆ.15ರಂದು ಕೇರಳ ರಾಜ್ಯದ ಹೊಸದುರ್ಗ ಜಿಲ್ಲಾ ಕಾರಾಗೃಹದಿಂದ ಆತ ಬಿಡುಗಡೆಯಾಗಿದ್ದ.

ಮೊಹಮ್ಮದ್ ರಿಯಾಜ್ ಯಾನೆ ಕಡಪು ರಿಯಾಜ್ ಎಂಬಾತನ ಮೇಲೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಪುತ್ತೂರು ನಗರ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿತ್ತು. ಆತನೂ 2025ರ ಮೇಎ 12ರಂದು ಕಾಸರಗೋಡು ಸಬ್ ಜೈಲಿನಿಂದ ಬಿಡುಗಡೆಯಾಗಿದ್ದ.

ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್‌ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸದಾನಂದ ಎಸ್.ನಾಯಕ್, ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ.ಹರ್ಷ ಪ್ರಿಯಾಂವಧ ನೇತೃತ್ವದಲ್ಲಿ ಕಾಪು ಇನ್‌ಸ್ಪೆಕ್ಟರ್‌ ಜಯಶ್ರೀ ಮಾನೆ, ಪಡುಬಿದ್ರಿ ಪಿಎಸ್‌ಐ ಸಕ್ತಿವೇಲು, ಅನಿಲ್ ಕುಮಾರ್, ಸಿಬ್ಬಂದಿ ರಾಜೇಶ್ ಪಿ., ಗಿರೀಶ್, ಹೆಡ್ ಕಾನ್‌ಸ್ಟೆಬಲ್ ಕೃಷ್ಣ ಪ್ರಸಾದ್, ಸಂದೇಶ್ ಕುಮಾರ್, ಕಾಪು ವೃತ್ತ ಕಚೇರಿಯ ಸಿಬ್ಬಂದಿ ಜೀವನ್ ಕುಮಾರ್, ಕಾಪು ಪೊಲೀಸ್ ಠಾಣಾ ಸಿಬ್ಬಂದಿ ಮೋಹನ್ ಚಂದ್ರ, ರಘು, ಅಜೆಕಾರು ಪೋಲಿಸ್ ಠಾಣಾ ಹೆಡ್ ಕಾನ್‌ಸ್ಟೆಬಲ್‌ ಸತೀಶ್, ಪ್ರದೀಪ್ ಶೆಟ್ಟಿ ಕಾರ್ಯಾಚರಣೆ ನಡೆಸಿದರು.

ಕಲಂದರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.