ADVERTISEMENT

ಸಾಮರಸ್ಯದ ನೆಲದಲ್ಲಿ ಕೋಮುದ್ವೇಷ ಬಿತ್ತಿದ ಬಿಜೆಪಿ

ಜನಧ್ವನಿ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 13:52 IST
Last Updated 22 ಫೆಬ್ರುವರಿ 2021, 13:52 IST
ಕಾಂಗ್ರೆಸ್‌ ಜನಧ್ವನಿ ಸಮಾವೇಶದಲ್ಲಿ ಭಾಗವಹಿಸಲು ಪಡುಬಿದ್ರಿಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.
ಕಾಂಗ್ರೆಸ್‌ ಜನಧ್ವನಿ ಸಮಾವೇಶದಲ್ಲಿ ಭಾಗವಹಿಸಲು ಪಡುಬಿದ್ರಿಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.   

ಉಡುಪಿ: ಸರ್ವಧರ್ಮ ಸಮನ್ವಯದ ನೆಲೆಯಾಗಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಕೋಮುವಾದದ ಪ್ರಯೋಗಶಾಲೆ ಮಾಡಿರುವ ಬಿಜೆಪಿ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಪನಂಬಿಕೆಯ ವಾತಾವರಣ ಸೃಷ್ಟಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸೋಮವಾರ ಕಾಪು ತಾಲ್ಲೂಕಿನ ಪಡುಬಿದ್ರಿಯಲ್ಲಿ ಕಾಂಗ್ರೆಸ್‌ ಜನಧ್ವನಿ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿ, ‘ಹಿಂದೆ ಉಭಯ ಜಿಲ್ಲೆಗಳಲ್ಲಿ ಧರ್ಮ ಕೋಮುಗಳ ನಡುವೆ ಸಂಘರ್ಷ ಇರಲಿಲ್ಲ. ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಕೋಮುದ್ವೇಷ ಹೆಚ್ಚಾಯಿತು ಎಂದು ಆರೋಪಿಸಿದರು.

ಸಮಾಜ ಒಗ್ಗೂಡಿಸುವುದು, ಎಲ್ಲ ಧರ್ಮ ಜಾತಿಗಳನ್ನು ಸಮಾನವಾಗಿ ಕಾಣುವುದು ಜಾತ್ಯತೀತತೆಯ ಉದ್ದೇಶ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ದೇಶದ ಐಕ್ಯತೆಗೆ ರಾಜೀವ್ ಗಾಂಧಿ, ಇಂದಿರಾಗಾಂಧಿ ಪ್ರಾಣ ತೆತ್ತಿದ್ದಾರೆ. ಆದರೆ ದೇಶಕ್ಕಾಗಿ ಯಾವ ಬಿಜೆಪಿ ನಾಯಕನೂ ಪ್ರಾಣಬಿಟ್ಟಿಲ್ಲ. ಇಂಥವರಿಂದ ಕಾಂಗ್ರೆಸ್‌ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ಅವರಿಗೆ 56 ಇಂಚಿನ ಎದೆ ಇದ್ದರೆ ಸಾಲದು; ಎದೆಯೊಳಗೆ ಬಡವರ, ರೈತರ, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇರಬೇಕು. ಕೃಷಿ ಕಾಯ್ದೆಗಳನ್ನು ವಿರೋಧಿಸಿ 3 ತಿಂಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. 200ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದರೂ ಮೋದಿಯ ಹೃದಯ ಕರಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ರೈತ ವಿರೋಧಿ ಕಾಯ್ದೆಯಗಳ ಬಗ್ಗೆ ಉಭಯ ಸದನಗಳಲ್ಲಿ ಚರ್ಚಿಸದೆ ಒಪ್ಪಿಗೆ ಪಡೆಯಲಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಮೋದಿಗೆ ನಂಬಿಕೆ ಇಲ್ಲ. ಅದಾನಿ ಹಾಗೂ ಅಂಬಾನಿಗೆ ಲಾಭ ಮಾಡಿಕೊಡುವ ಹುನ್ನಾರ ಕಾಯ್ದೆಯ ಹಿಂದಿದೆ ಎಂದು ಆರೋಪಿಸಿದರು.

ಸಚಿವ ಉಮೇಶ್ ಕತ್ತಿ ಟಿವಿ, ಬೈಕ್‌, ಫ್ರಿಡ್ಜ್‌ ಇದ್ದವರಿಂದ ಬಿಪಿಎಲ್‌ ಕಾರ್ಡ್‌ ಕಿತ್ತುಕೊಳ್ಳುವುದಾಗಿ ಹೇಳಿದ್ದಾರೆ. ಇಂತಹ ಮನಸ್ಥಿತಿ ಇದ್ದವರಿಂದ ಬಡವರ ಕಾಳಜಿ ನಿರೀಕ್ಷೆ ಸಾಧ್ಯವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.