ADVERTISEMENT

ಪ್ರಶಸ್ತಿಗೂ ಮೊದಲು ಕಲಾವಿದರ ಹಸಿವು ತಣಿಸಿ

ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ವೈದೇಹಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 14:39 IST
Last Updated 28 ಫೆಬ್ರುವರಿ 2020, 14:39 IST
ಶುಕ್ರವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಜಾನಪದ ಉತ್ಸವದಲ್ಲಿ ಸಿದ್ಧಿ ಡಮಾಮಿ ನೃತ್ಯ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರಮಾಣ ಪತ್ರ ವಿತರಿಸಿದರು.
ಶುಕ್ರವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಜಾನಪದ ಉತ್ಸವದಲ್ಲಿ ಸಿದ್ಧಿ ಡಮಾಮಿ ನೃತ್ಯ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರಮಾಣ ಪತ್ರ ವಿತರಿಸಿದರು.   

ಉಡುಪಿ: ಕೊರಗ ನೃತ್ಯ, ಕಂಗೀಲು ನೃತ್ಯದಂತಹ ಜಾನಪದ ಕಲೆಗಳು ಜನಪದರ ಬದುಕಿನಿಂದ ಚಿಮ್ಮಿ ಬಂದಂಥವು. ಈ ಕಲೆಗಳಲ್ಲಿ ಸುಖ, ದುಃಖಗಳು ಮೇಳೈಸಿರುವುದನ್ನು ಕಾಣಬಹುದು ಎಂದು ಖ್ಯಾತ ಸಾಹಿತಿ ವೈದೇಹಿ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಅಕಾಡೆಮಿ, ಸಂಸ್ಕೃತಿ ಪ್ರತಿಷ್ಠಾನ, ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿರುವ ಸ್ಪೃಶ್ಯ, ಅಸ್ಪೃಶ್ಯ, ಶಿಷ್ಟ, ಪರಿಶಿಷ್ಟಗಳೆಂಬ ಕಟ್ಟುಪಾಡುಗಳನ್ನು ದಾಟಬೇಕಾದರೆ ಸಂಸ್ಕೃತಿ ಹಾಗೂ ಭಾವನೆಗಳ ವಿನಿಮಯವಾಗಬೇಕು. ಜಾನಪದ ಕಲೆಗಳನ್ನು ಎಲ್ಲ ವರ್ಗದವರಿಗೂ ಹಂಚಿ ಬಿಡಬೇಕು ಎಂದು ವೈದೇಹಿ ಹೇಳಿದರು.

ADVERTISEMENT

ಪ್ರಶಸ್ತಿ ಕೊಡುವ ಮೊದಲು ಕಲಾವಿದರ ಹಸಿವು ತಣಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮಾಸಾಶನ ಸೇರಿದಂತೆ ಕಲಾವಿದರ ಜೀವನ ನಿರ್ವಹಣೆಗೆ ಸಿಗಬೇಕಾದ ಸೌಲಭ್ಯಗಳು ತಲುಪಬೇಕು ಎಂದು ಸಲಹೆ ನೀಡಿದರು.

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ, ಸರ್ಕಾರ ಹೆಚ್ಚಿನ ಅನುದಾನ ಕೊಟ್ಟರೆ ಜಾನಪದ ಕಲಾವಿದರಿಗೆ ವಾದ್ಯ ಪರಿಕರಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಜಾನಪದ ಕಲೆಗಳಿಗೆ ಜನಪದವೇ ತಾಯಿಬೇರು. ಈ ಕಲೆಯನ್ನು ಪೋಷಿಸುವ ಹಾಗೂ ಮೂಲವನ್ನು ಕಾಪಾಡುವ ಕೆಲಸ ಆಗಬೇಕು. ಹಾಗಾಗಿ, ಫೈಬರ್ ವಾದ್ಯದ ಬದಲು ಚರ್ಮದ ವಾದ್ಯಗಳನ್ನು ಬಳಸಬೇಕು ಎಂದು ಮಂಜಮ್ಮ ಜೋಗತಿ ಸಲಹೆ ನೀಡಿದರು.

ಹಿಂದೆ, ಕಲೆಗಳನ್ನು ಕಲಿಯಲು ಗುರುದಕ್ಷಿಣೆ ನೀಡಬೇಕಿತ್ತು. ಇಂದು ಸರ್ಕಾರವೇ ಕಲಿಸಲು ಶಿಷ್ಯ ದಕ್ಷಿಣೆ ನೀಡುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಕನ್ನಡ ಭಾಷೆಯ ಉಳಿವಿಗೆ ಕಲಾವಿದರು ಮುಂದಾಗಬೇಕು. ಮಕ್ಕಳಿಗೆ ಪರಭಾಷೆಗಳ ಜತೆಗೆ, ಕನ್ನಡವನ್ನೂ ಕಲಿಸಬೇಕು ಎಂದರು.

ಜಾನಪದ ಕಲೆಗಳು ಯುವ ಜನಾಂಗವನ್ನು ತಲುಪಬೇಕು ಎಂದು ಕಾಲೇಜುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಹಾಗೆಯೇಸಂಸ್ಕೃತಿ ವಿನಿಮಯ ಕಾರ್ಯಕ್ರಮಗಳು ರಾಜ್ಯದಾದ್ಯಂತ ಮುಂದುವರಿಯಲಿವೆ. ಚಿಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಶೀಘ್ರವೇ ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೊರಗ ಸಮುದಾಯದ ಮುಖಂಡ ಗಣೇಶ್ ಮಾತನಾಡಿದರು. ಶಿಬಿರಾರ್ಥಿ ರಾಮಾಂಜಿ ಶಿಬಿರದ ಕುರಿತು ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರೊ.ಎಂ.ಎಲ್‌. ಸಾಮಗ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್‌.ನಮ್ರತಾ, ಸಂಸ್ಕೃತಿ ವಿಶ್ವಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್, ಕಾರ್ಯಕ್ರಮದ ಸಂಚಾಲಕ ಎಚ್‌.ಪಿ. ರವಿರಾಜ್, ಲಕ್ಷ್ಮಣ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.