ADVERTISEMENT

ಎಳನೀರಿಗಿಂತಲೂ ಆರೋಗ್ಯಕರವಾದ ಕಲ್ಪರಸ ಉಡುಪಿಯಲ್ಲಿ ಉತ್ಪಾದನೆ: ಶೀಘ್ರ ಮಾರುಕಟ್ಟೆಗೆ

ಜಪ್ತಿಯಲ್ಲಿ ಕಲ್ಪರಸ ತಯಾರಿಕಾ ಘಟಕ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 5:23 IST
Last Updated 5 ಮಾರ್ಚ್ 2020, 5:23 IST
ತೆಂಗಿನ ಮರದ ಕೊಂಬಿನ ಕಲ್ಪರಸ ತೆಗೆಯಲು ಕಟ್ಟಿರುವ ಹೈಜಿನಿಕ್‌ ಬಾಕ್ಸ್‌.
ತೆಂಗಿನ ಮರದ ಕೊಂಬಿನ ಕಲ್ಪರಸ ತೆಗೆಯಲು ಕಟ್ಟಿರುವ ಹೈಜಿನಿಕ್‌ ಬಾಕ್ಸ್‌.   

ಉಡುಪಿ: ತೆಂಗಿನ ಹೊಂಬಾಳೆಯಿಂದ (ಕೊಂಬು) ಶೋಧಿಸಿದ ‘ಕಲ್ಪರಸ’ ಆರೋಗ್ಯ ವರ್ಧಕ ಪಾನೀಯವನ್ನು ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದು ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ ಎಂಬುದು ಅಧ್ಯಯನದಿಂದ ದೃಢಪಟ್ಟಿದೆಯಂತೆ.

ಭಾರತೀಯ ಕಿಸಾನ್‌ ಸಂಘ ಹಾಗೂ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಕಲ್ಪರಸ ತೆಗೆಯುವ ಯೋಜನೆಯನ್ನು ಸಂಸ್ಥೆ ರೂಪಿಸಿದೆ.

ಕಲ್ಪರಸ ತೆಗೆಯುವ ವಿಧಾನ

ADVERTISEMENT

ನೀರಾ ಮಾದರಿಯಲ್ಲಿಯೇ ಕಲ್ಪರಸವನ್ನೂ ತೆಗೆಯಲಾಗುತ್ತದೆ. ನೀರಾವನ್ನು ತೆರೆದ ಮಡಿಕೆ ಹಾಗೂ ಇತರ ಉಪಕರಣ ಬಳಸಿಕೊಂಡು ತೆಗೆದರೆ, ಕಲ್ಪರಸವನ್ನು ಮುಚ್ಚಿದ ಹೈಜಿನಿಕ್‌ ಬಾಕ್ಸ್‌ (ಐಸ್‌ಬಾಕ್ಸ್‌ ಟೆಕ್ನಾಲಾಜಿ) ನಲ್ಲಿ ಸಂಗ್ರಹಿಸಲಾಗುತ್ತದೆ.

ಕೊಂಬಿನ ಮಾದರಿಯಲ್ಲಿರುವ ತೆಂಗಿನ ಹೂವಿಗೆ ಹಗ್ಗ ಕಟ್ಟಿ, ಅದನ್ನು ಅರಳದಂತೆ ಮಾಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಕೊಂಬನ್ನು ಸ್ವಲ್ಪ ಸ್ವಲ್ಪ ಕತ್ತರಿಸಲಾಗುತ್ತದೆ. ಕೊಂಬಿನಿಂದ ಹೊರಬರುವ ರಸವನ್ನು ಮಂಜುಗಡ್ಡೆ ಹಾಕಿದ ಹೈಜಿನಿಕ್‌ ಬಾಕ್ಸ್‌ನಲ್ಲಿ ಶೇಖರಣೆ ಮಾಡಲಾಗುತ್ತದೆ.

ಬಾಕ್ಸ್‌ನ ಕೆಳಭಾಗದಲ್ಲಿ ಮಂಜುಗಡ್ಡೆ ಹಾಕಿ, ಅದರ ಮೇಲೆ ಪ್ಲಾಸ್ಟಿಕ್‌ ಕವರ್‌ ಇಡಲಾಗುತ್ತದೆ. ಕೊಂಬಿನಿಂದ ಒಸರುವ ಕಲ್ಪರಸವನ್ನು ನೇರವಾಗಿ ಪ್ಲಾಸ್ಟಿಕ್‌ ಕವರ್‌ಗೆ ಬೀಳುವಂತೆ ಮಾಡಲಾಗುತ್ತದೆ. ಬಾಕ್ಸ್‌ ಕೆಳಭಾಗದಲ್ಲಿ ಮಂಜುಗಡ್ಡೆ ಇರುವುದರಿಂದ ರಸ ಹುಳಿಯಾಗುವುದಿಲ್ಲವಂತೆ. ತಿಳಿ ಬಂಗಾರದ ಬಣ್ಣದಲ್ಲಿರುವ ರಸ ಸಿಹಿ ಹಾಗೂ ರುಚಿಕರವಂತೆ. ಜತೆಗೆ ಆರೋಗ್ಯ ವರ್ಧಕವಾಗಿದ್ದು, ಡಯಾಬಿಟಿಸ್‌ ರೋಗಿಗಳು ಸೇವಿಸಬಹುದು ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.

ಕೆಎಂಎಫ್‌ ಮಾದರಿ ಅಳವಡಿಕೆಗೆ ಚಿಂತನೆ

ಕೆಎಂಎಫ್‌ ಗ್ರಾಮಗಳಲ್ಲಿ ಹಾಲು ಸಂಗ್ರಹಿಸುವ ಮಾದರಿಯಲ್ಲಿಯೇ ರೈತರಿಂದ ಕಲ್ಪರಸ ಸಂಗ್ರಹಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಭಾರತೀಯ ಕಿಸಾನ್ ಸಂಘದಿಂದ ಈಗಾಗಲೇ 54 ತೆಂಗು ಬೆಳೆಗಾರರ ಸೊಸೈಟಿ ಹಾಗೂ 3 ತೆಂಗು ಫೆಡರೇಶನ್‌ ರಚಿಸಲಾಗಿದ್ದು, 4,820 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ರೈತರಿಗೆ ಹೆಚ್ಚಿನ ಆದಾಯ ತಂದುಕೊಡಲು ಯೋಜನೆ ರೂಪಿಸಲಾಗಿದೆ. ಆಯಾ ಭಾಗದ ಸೊಸೈಟಿಯಲ್ಲಿ ಸಂಗ್ರಹಿಸುವ ಕಲ್ಪರಸವನ್ನು ಘಟಕಕ್ಕೆ ಕೊಂಡೊಯ್ದು, ಅಲ್ಲಿ ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ಅಧ್ಯಕ್ಷ ಸತ್ಯನಾರಾಯಣ ಉಡುಪ ತಿಳಿಸಿದರು.

ಜಪ್ತಿಯಲ್ಲಿ ಕಲ್ಪರಸ ತಯಾರಿಕಾ ಘಟಕ

ಅಬಕಾರಿ ಇಲಾಖೆಯಿಂದ ಕಲ್ಪರಸ ತಯಾರಿಸುವ ಘಟಕ ಸ್ಥಾಪಿಸಲು ತಾತ್ಕಾಲಿಕ ಲೈಸೆನ್ಸ್‌ ದೊರಕಿದ್ದು, ಕುಂದಾಪುರದ ಜಪ್ತಿಯಲ್ಲಿ ಘಟಕ ನಿರ್ಮಿಸಲಾಗುತ್ತಿದೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಏಪ್ರಿಲ್‌ ಮೊದಲ ವಾರದಲ್ಲಿ ಕಲ್ಪರಸ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಉಡುಪ ತಿಳಿಸಿದರು.

ಇದು ರಾಜ್ಯದ ಎರಡನೆ ಕಲ್ಪರಸ ತಯಾರಿಕಾ ಘಟಕವಾಗಿದ್ದು, ಈಗಾಗಲೇ ಮಲೆನಾಡ್‌ ನೆಟ್ಸ್‌ ಎಂಬ ಕಂಪೆನಿ ಕಲ್ಪರಸ ತಯಾರಿಕೆಯಲ್ಲಿ ತೊಡಗಿದ್ದು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ನಗರಗಳಲ್ಲಿ ಮಾರಾಟ ಮಾಡುತ್ತಿದೆ. ಕೇವಲ 20ರಿಂದ 25 ರೈತರಿಂದ ಮಾತ್ರ ಕಲ್ಪರಸ ಸಂಗ್ರಹಿಸಲಾಗುತ್ತಿದೆ ಎಂದರು.

ರೈತರಿಗೆ ಆಗುವ ಲಾಭ

8 ತೆಂಗಿನ ಮರಗಳಿಂದ ಕಲ್ಪರಸ ತೆಗೆಯುವ ರೈತರು, ವಾರ್ಷಿಕ ₹ 2.40 ಲಕ್ಷ ಆದಾಯಗಳಿಸಬಹುದು. ಕಲ್ಪರಸ ತೆಗೆದ ಬಳಿಕವೂ ತೆಂಗಿನ ಮರಗಳಿಂದ ಹೆಚ್ಚು ಕಾಯಿಗಳು ಸಿಗುತ್ತವೆ. ಕರಾವಳಿಯಲ್ಲಿ ಹೆಚ್ಚಿನ ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.