ADVERTISEMENT

ನ. 15ಕ್ಕೆ ಉಡುಪಿಯಲ್ಲಿ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ

ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂ. ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 11:13 IST
Last Updated 9 ನವೆಂಬರ್ 2019, 11:13 IST

ಉಡುಪಿ: ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ಹಾಗೂ ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಭಕ್ತ ಕನಕದಾಸರ 532ನೇ ಜಯಂತಿ ಮಹೋತ್ಸವದ ಪ್ರಯುಕ್ತ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ನ. 15ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿಯ ರಾಜ್ಯಾಧ್ಯಕ್ಷ ಓಂ. ಕೃಷ್ಣಮೂರ್ತಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ನಗರದ ಜೋಡುಕಟ್ಟೆಯಿಂದ ಕೃಷ್ಣಮಠದ ಕನಕನ ಕಿಂಡಿಯವರೆಗೆ 751 ಮಹಿಳೆಯರಿಂದ ಕುಂಭ ಕಳಸ ಮೆರವಣಿಗೆ ನಡೆಯಲಿದ್ದು, ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡುವರು ಎಂದರು.

ಬಳಿಕ ಮೆರವಣಿಗೆಯೂ ನಗರದ ಪ್ರಮುಖ ಬೀದಿಗಳಲ್ಲಿ ಕಲಾತಂಡ, ಡೊಳ್ಳು ಕುಣಿತ ಮೊದಲಾದ ಕಲಾ ಪ್ರದರ್ಶನಗಳೊಂದಿಗೆ ಸಾಗಿಬರಲಿದ್ದು, ಸಂಸ್ಕೃತ ಕಾಲೇಜು ಮಾರ್ಗದ ಮೂಲಕ ರಥಬೀದಿಗೆ ಆಗಮಿಸಿ ಶ್ರೀಕೃಷ್ಣಮಠದ ಎದುರಿಗೆ ಇರುವ ಕನಕದಾಸ ಮಂದಿರಕ್ಕೆ ಬಂದು ಮುಕ್ತಾಯಗೊಳ್ಳಲಿದೆ. ಮೆರವಣಿಗೆಯಲ್ಲಿ ಸುಮಾರು 2500 ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ADVERTISEMENT

ಮಧ್ಯಾಹ್ನ 12.30ಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಕನಕದಾಸರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವರು. ಬಳಿಕ 1 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ವಿದ್ಯಾಧೀಶ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸುವರು. ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವರಾದ ವಿನಯಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ, ಅಧ್ಯಕ್ಷ ಹನುಮಂತ ಐಹೊಳೆ, ಪ್ರಮುಖರಾದ ಹನುಮಂತ ಎಸ್‌. ಡೊಳ್ಳಿನ, ಗ್ಯಾನಪ್ಪ ಎಚ್‌. ಕುರಿ, ಸಂಗಮೇಶ ಆಸಂಗಿ, ಮುತ್ತಪ್ಪ ಎಸ್‌. ಕುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.