ADVERTISEMENT

ವೈಚಾರಿಕ, ವೈಜ್ಞಾನಿಕ ಸಾಮರಸ್ಯ ಮೆರೆಯಲಿ

ಸಮ್ಮೇಳನಾಧ್ಯಕ್ಷ ಡಾ.ಗಣನಾಥ ಎಕ್ಕಾರು ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 15:11 IST
Last Updated 18 ಜನವರಿ 2019, 15:11 IST

ಉಡುಪಿ: ಪ್ರಸ್ತುತ ನಾವೆಲ್ಲರೂ ಸಂಕೀರ್ಣ ಕಾಲಘಟ್ಟದಲ್ಲಿದ್ದು, ಸಾಮಾಜಿಕ ಮಾಧ್ಯಮಗಳ ವೇಗದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡವನ್ನು ಕಟ್ಟುವ, ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಗಣನಾಥ ಎಕ್ಕಾರು ಅಭಿಪ್ರಾಯಪಟ್ಟರು.

ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಉಡುಪಿ ವಿಶಿಷ್ಟ ಸಾಂಸ್ಕೃತಿಕ ಪ್ರದೇಶ. ತುಳು, ಕೊಂಕಣಿ, ಬ್ಯಾರಿ ಹಾಗೂ ಇತರ ಭಾಷೆಗಳಿದ್ದರೂ, ಆಡಳಿತಾತ್ಮಕ ಹಾಗೂ ಶೈಕ್ಷಣಿಕವಾಗಿ ಕನ್ನಡ ಅಸ್ತಿತ್ವದಲ್ಲಿದೆ. ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳು ಎರಡು ಕಣ್ಣುಗಳಿದ್ದಂತೆ, ಯಾವುದಕ್ಕೂ ನೋವಾಗದಂತೆ ಭಾಷೆಯ ಬೆಳವಣಿಗೆ ಆಗಬೇಕು ಎಂದರು.

ಪತ್ರಿಕೆಗಳು, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಸಂಘಟನೆಗಳು ಜಿಲ್ಲೆಯಲ್ಲಿ ಕನ್ನಡ ಉಳಿವಿಗೆ ಶ್ರಮಿಸಿವೆ. ಬೈಲೂರು ರಾಮರಾಯನ ಸಂಪಾದಕತ್ವದ ಸುದರ್ಶನ ಮಾಸಪತ್ರಿಕೆ, ಬೆನಗಲ್‌ ರಾಮರಾಯರ ಸುವಾಸಿನಿ, ಕೆರೋಡಿ ಸುಬ್ಬರಾಯರ ಶ್ರೀಕೃಷ್ಣಸೂಕ್ತಿ, ವಿಠಲರಾಯರ ಕಂಠೀರವ, ಹಿರಿಯಡ್ಕ ರಾಮರಾಯರ ಸತ್ಯಾಗ್ರಹಿ, ಶಿವರಾಮ ಕಾರಂತರ ವಸಂತ ಹೀಗೆ ಹಲವು ಪತ್ರಿಕೆಗಳು ಕನ್ನಡ ಸೃಜನ ಶೀಲ ಬರವಣಿಗೆಗೆ ಕೊಡುಗೆ ನೀಡಿವೆ ಎಂದರು.

ADVERTISEMENT

1949ರಲ್ಲಿ ಸ್ಥಾಪನೆಯಾದ ಮಹಾತ್ಮಗಾಂಧಿ ಸ್ಮಾರಕ ಕಾಲೇಜು ಸಾಹಿತ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿ.ಎಂ.ಇನಾಂದಾರ್, ಶಂಕರ ಮೊಕಾಶಿ ಪುಣೇಕರ, ಗೋಪಾಲಕೃಷ್ಣ ಅಡಿಗರಂತಹ ಅಗ್ರಗಣ್ಯ ಸಾಹಿತಿಗಳು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಕಾರಣರಾದರು. ಕಡೇಕಾರು ಗೋಪಾಲ ಕೃಷ್ಣರಾಯರು 1944 ಸ್ಥಾಪಿಸಿದ ಕರ್ನಾಟಕ ಸಂಘ, ಬಳಿಕ ಸ್ಥಾಪನೆಯಾದ ಕಲಾವೃಂದ, ಅಜಪುರ ಕರ್ಣಾಟಕ ಸಂಘ, ರಥಬೀದಿ ಗೆಳೆಯರು, ಉಡುಪಿ ರಂಗಭೂಮಿ, ಉಡುಪಿ ತುಳುಕೂಟ ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಮೂಡಿಸಿವೆ ಎಂದರು.

ಪ್ರಕೃತಿ ಹಾಗೂ ಸಂಸ್ಕೃತಿಯ ಸಂಬಂಧ ಅನನ್ಯವಾದುದು. ಪ್ರಕೃತಿಯ ನಾಶ ಸಂಸ್ಕೃತಿಯ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ಸಂಸ್ಕೃತಿ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಕರ್ನಾಟಕ ಹಲವು ಸಂಸ್ಕೃತಿಗಳ ಸಂಗಮ. ಪ್ರಾದೇಶಿಕ ಭಾಷೆ, ಸಂಸ್ಕೃತಿ ರಕ್ಷಣೆ ಕನ್ನಡ ಭಾಷಾ ಬೆಳವಣಿಗೆಗೆ ಪೂರಕ. ಸರ್ಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ದಕ್ಷಿಣ ಕನ್ನಡ ಜಿಲ್ಲೆಗೆ ನೀಡುವ ಪ್ರಾತಿನಿಧ್ಯವನ್ನು ಉಡುಪಿಗೂ ನೀಡಬೇಕು ಎಂದು ಗಣನಾಥ ಎಕ್ಕಾರು ಒತ್ತಾಯಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಲಿ, ವೈಚಾರಿಕ ವೈಜ್ಞಾನಿಕ ಪ್ರಜ್ಞೆ ಮೆರೆಯಲಿ, ಸಾಮರಸ್ಯದ ಬದುಕು ನಮ್ಮದಾಗಲಿ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.