ದೀಪಾವಳಿ
ಕಾಪು (ಪಡುಬಿದ್ರಿ): ದೀಪಾವಳಿ ಪ್ರಯುಕ್ತ ನರಕ ಚತುರ್ದಶಿ ಆವರಣೆ ದಿನದ ಮುಂಜಾನೆ ಕಾಪು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಳ್ಳಮುಟ್ಟೆ ಸಂಭ್ರಮಾಚರಣೆ ಭಕ್ತಿಭಾವದಿಂದ ಜರುಗಿತು.
ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಕೃಷಿಗೆ ಪೂರಕವಾಗಿ ಆಚರಿಸುತ್ತಿದ್ದ ಈ ಮುಳ್ಳಮುಟ್ಟೆ ಕಾರ್ಯಕ್ರಮ ಇಂದು ಧಾರ್ಮಿಕ ಸ್ಪರ್ಶ ಪಡೆದಿದೆ. ನರಕಾಸುರ ವಧೆಯ ಕಲ್ಪನೆಯೊಂದಿಗೆ ದುಷ್ಟಾರಿಷ್ಟಗಳು ಊರಿನಿಂದ ದೂರವಾಗಲಿ ಎಂಬ ಉದ್ದೇಶದಿಂದ ಮುಳ್ಳುಮುಟ್ಟೆ ದಹಿಸಲಾಗುತ್ತದೆ.
ಕೊಪ್ಪಲಂಗಡಿ, ಇನ್ನಂಜೆ, ಮಲ್ಲಾರು, ಮಜೂರು, ಕಲ್ಯಾಲು, ಪಾಂಗಾಳ, ಕಟಪಾಡಿ, ಮಣಿಪುರ, ಪಡುಬೆಳ್ಳೆ, ಬೆಳಪು ಪರಿಸರಗಳಲ್ಲಿ ಈ ಸಂಪ್ರದಾಯ ಜೀವಂತವಾಗಿದೆ. ಆಚರಣೆಗೆ ಪೂರ್ವಭಾವಿಯಾಗಿ ಬಂಟ ಕೋಲ ನಡೆಯುತ್ತದೆ.
ಬಂಟ ಕೋಲ ವೇಷಧಾರಿಗಳು ಊರಿನ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ತೆರಳಿ, ಕಾಣಿಕೆ ಸಮರ್ಪಿಸಿ ‘ಊರಿನ ಮಾರಿ ಓಡಿಸಲು ಶಕ್ತಿ ನೀಡಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಬಳಿಕ ಗ್ರಾಮಸ್ಥರು ಸಾಂಪ್ರದಾಯಿಕ ವಾದ್ಯಗಳ ತಾಳಕ್ಕೆ, ತಾಸೆ ಮತ್ತು ಡೋಲಿನ ವಾದನದಕ್ಕೆ ನೃತ್ಯ ಮಾಡುತ್ತಾ ಕಾಪು ಪೇಟೆವರೆಗೆ ತೆರಳುತ್ತಾರೆ.
‘ಮುಳ್ಳಮುಟ್ಟೆ ಸಂಭ್ರಮ ಹಬ್ಬ ಮಾತ್ರವಲ್ಲ, ತುಳುನಾಡಿನ ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಏಕತೆಯ ಸಂಕೇತವೂ ಹೌದು’ ಎಂದು ಮುಖಂಡ ಲಾಲಾಜಿ ಆರ್. ಮೆಂಡನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.