ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ಸಮಸ್ತ ಭಕ್ತ ಬಾಂಧವರ ಸಹಕಾರ, ಸಹಯೋಗದಲ್ಲಿ 3 ನೇ ಬಾರಿಗೆ ನಡೆಯುವ ಉಚ್ಚಿಲ ದಸರಾ-2024 ನ್ನು ಶಿಸ್ತುಬದ್ಧವಾಗಿ, ಸಾಂಪ್ರದಾಯಿಕವಾಗಿ ಹಾಗೂ ವಿಭಿನ್ನವಾದ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲು ಭಕ್ತರು ಸಹಕಾರ ನೀಡುವಂತೆ ಮೊಗವೀರ ಸಮುದಾಯದ ಮುಖಂಡ ಜಿ.ಶಂಕರ್ ಮನವಿ ಮಾಡಿದರು.
ಬುಧವಾರ ನಡೆದ ದಸರಾ ಉತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ದಿನಂಪ್ರತಿ ಚಂಡಿಕಾ ಯಾಗ, ಭಜನೆ, ಸಹಸ್ರ ಸುಮಂಗಲೆಯರಿಂದ ಪ್ರತಿ ನಿತ್ಯ ಸಾಮೂಹಿಕ ಕುಂಕುಮಾರ್ಚನೆ, ಖ್ಯಾತ ಕಲಾವಿದರು ಹಾಗೂ ಸ್ಥಳೀಯ ಮಹಿಳೆಯರಿಂದ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ನಿತ್ಯ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಸಾರ್ವಜನಿಕ ಉಪಹಾರದ ವ್ಯವಸ್ಥೆ ಮಾಡಲಾಗುವುದು. ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮುದ್ದು ಮಕ್ಕಳಿಗಾಗಿ ಶಾರದಾ ಮಾತೆ ಛದ್ಮವೇಷ ಸ್ಪರ್ಧೆ, ಮಹಿಳೆಯರಿಗಾಗಿ ಹುಲಿಕುಣಿತ ಸ್ಪರ್ಧೆ ನಡೆಯಲಿದೆ. ಮಾತ್ರವಲ್ಲದೆ ಕುಸ್ತಿ ಹಾಗೂ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗುವುದು. ಸಾಮೂಹಿಕ ದಾಂಡಿಯ ನೃತ್ಯ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಂಡಗಳಿಂದ ಸಾಮೂಹಿಕ ಕುಣಿತ ಭಜನೆ ಇರಲಿದೆ ಎಂದು ಹೇಳಿದರು.
12ರಂದು ಶೋಭಯಾತ್ರೆಯು ಹೊರಡಲಿದ್ದು ಕಾಪು ದೀಪಸ್ತಂಭ ಬಳಿ ಸಮುದ್ರ ತೀರದಲ್ಲಿ ವಿಗ್ರಹಗಳ
ವಿಸರ್ಜನೆ ಮಾಡಲಾಗುವುದು. ಶೋಭಯಾತ್ರೆಯಲ್ಲಿ ನವ ನವೀನ ಮಾದರಿಯ ಟ್ಯಾಬ್ಲೋಗಳು, ಹುಲಿವೇಷ ತಂಡಗಳು, ಭಜನಾ ತಂಡಗಳು, ಚೆಂಡೆ ಬಳಗ ಸೇರಿದಂತೆ ವಿವಿಧ ವೇಷ ಭೂಷಣಗಳು ಇರಲಿದೆ.
ವಿಸರ್ಜನೆಯ ಸಂದರ್ಭದಲ್ಲಿ ಸಮುದ್ರ ಮಧ್ಯೆ ಬೋಟುಗಳಿಂದ ವಿದ್ಯುತ್ ದೀಪಾಲಂಕಾರ, ಲೇಸರ್ ಶೋ, ಮಹಿಳೆಯರಿಂದ ಏಕಕಾಲದಲ್ಲಿ ಸಾಮೂಹಿಕ ಮಂಗಳಾರತಿಯ ಕಾರ್ಯಕ್ರಮವಿರುತ್ತದೆ. ಕಾಶಿಯ ಶ್ರೀ ವಿಶ್ವನಾಥದಿಂದ ಆಗಮಿಸುವ ಅರ್ಚಕರಿಂದ ಬೃಹತ್ ಗಂಗಾರತಿ ಬೆಳಗಿಸುವ ಕಾರ್ಯಕ್ರಮ, ಆಕರ್ಷಕ ಸುಡು ಮದ್ದು ಪ್ರದರ್ಶನ ಆಯೋಜಿಸಲಾಗುವುದು ಎಂದರು.
ಈ ಬಾರಿಯ ಉಚ್ಚಿಲ ದಸರಾ ಉತ್ಸವನ್ನು ಯಶಸ್ವಿಗೊಳಿಸಲು ಭಕ್ತಾಭಿಮಾನಿಗಳು ಮತ್ತು ಸಮಾಜ ಬಾಂಧವರು ಶಕ್ತಿ ಮೀರಿ ಶ್ರಮಿಸುವಂತೆ ವಿನಂತಿಸಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಸುವರ್ಣ, ಮೋಹನ್ ಬೇಂಗ್ರೆ, ಗಿರಿಧರ್ ಎಸ್.ಸುವರ್ಣ, ಹರಿಯಪ್ಪ ಕೋಟ್ಯಾನ್, ಚೇತನ್ ಬೇಂಗ್ರೆ, ವಿನಯ್ ಕರ್ಕೇರ ಮಲ್ಪೆ, ರಾಘವೇಂದ್ರ ಉಪಾಧ್ಯಾಯ, ಶರಣ್ ಕುಮಾರ್ ಮಟ್ಟು, ವರದರಾಜ್ ಬಂಗೇರ ಮಂಗಳೂರು, ಮನೋಜ್ ಕಾಂಚನ್, ಸತೀಶ್ ಅಮೀನ್ ಬಾರ್ಕೂರು, ರತ್ನಾಕರ ಸಾಲ್ಯಾನ್, ನಾಗರಾಜ ಸುವರ್ಣ, ಜಯಂತ್ ಅಮೀನ್ ಕೋಡಿ, ಮನೋಹರ್ ಬೋಳೂರು, ಸುಜಿತ್ ಸಾಲ್ಯಾನ್, ಉಷಾ ಕಿರಣ್ ಬೋಳೂರು, ಸುಗುಣ ಕರ್ಕೇರ ಉಪಸ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.