ಕಾರ್ಕಳ: ‘ದಿ.ಗೋಪಾಲ ಭಂಡಾರಿ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಾಧಕ’ ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿದರು.
ಇಲ್ಲಿನ ದೇವಾಡಿಗ ಸುಧಾರಕ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಯೋಜಿಸಿದ್ದ ದಿ.ಗೋಪಾಲ ಭಂಡಾರಿ ಅವರ 6ನೇ ಪುಣ್ಯಸ್ಮರಣೆ, ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವರು ಶಾಸಕನಾಗಿ ಸಾಂವಿಧಾನಿಕ ಮೌಲ್ಯದಡಿ ಕಾರ್ಯ ನಿರ್ವಹಿಸಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲಪಿಸುವಲ್ಲಿ ಯಶಸ್ವಿಯಾದವರು. ಭೂ ಸುಧಾರಣಾ ಮಸೂದೆಯನ್ನು ಯಶಸ್ವಿಯಾಗಿ ಜಾರಿ ಮಾಡುವಲ್ಲಿ ಗೇಣಿದಾರರ ಪರವಾಗಿ ಅಹರ್ನಿಶಿ ದುಡಿದ ಅವರು ರಾಜಕೀಯ, ಸಾಮಾಜಿಕ ಬದುಕಿನಿಂದ ಮಾದರಿಯಾಗಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ, ದಿ.ಗೋಪಾಲ ಭಂಡಾರಿ ಅವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಜನಪರ ಕಾರ್ಯಗಳನ್ನು ಜನರಿಗೆ ತಲಪಿಸಿದವರು. ಎರಡು ಅವಧಿಗೆ ಕ್ಷೇತ್ರದ ಶಾಸಕರಾಗಿ ವಿಧಾನಸಭೆಯಲ್ಲಿ ಹೆಬ್ರಿ ತಾಲೂಕು ಘೋಷಣೆ ಬಗ್ಗೆ ಧ್ವನಿಯೆತ್ತಿ ಅದನ್ನು ಸಾಧಿಸಿ ತೋರಿಸಿದವರು. ಕ್ಷೇತ್ರದ ಯುವ ರಾಜಕಾರಣಿಗಳು ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ವಕೀಲ ಶೇಖರ ಮಡಿವಾಳ ಮಾತನಾಡಿ, ಭಂಡಾರಿ ಅವರು ಆಶ್ರಯ ಯೋಜನೆ, ಅಕ್ರಮ ಸಕ್ರಮ, 94ಸಿ, ಸಿಸಿಯ ಯಶಸ್ಸಿ ಅನುಷ್ಠಾನ ಮಾಡಿದವರು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಪಾಲ ಭಂಡಾರಿ ಅವರ ಬದುಕು, ರಾಜಧರ್ಮದ ನಡೆ ನಮಗೆ ಆದರ್ಶ. ನನ್ನ ರಾಜಕೀಯ ಬದುಕಿಗೆ ಅವರ ಆದರ್ಶವೇ ಪ್ರೇರಣೆ ಎಂದರು.
ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ನುಡಿನಮನ ಸಲ್ಲಿಸಿದರು. ರಕ್ತದಾನ ಶಿಬಿರದಲ್ಲಿ 82 ಯುನಿಟ್ ರಕ್ತ ಸಂಗ್ರವಾಯಿತು. ರಕ್ತದಾನಿಗಳಿಗೆ ಸಸಿ, ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ಜರಿಗುಡ್ಡೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಆರ್ಥಿಕ ಸಹಾಯ ನೀಡಲಾಯಿತು.
ಕಾಂಗ್ರೆಸ್ ಮುಖಂಡ ಮಂಜುನಾಥ ಪೂಜಾರಿ ಮುದ್ರಾಡಿ, ಜಿಲ್ಲಾ ಉಪಾದ್ಯಕ್ಷ ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟಲಿನೊ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್, ನವೀನ್ ಅಡ್ಯಂತಾಯ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ, ವಿವೇಕಾನಂದ ಶೆಣೈ, ಕಿರಣ್ ಹೆಗ್ಡೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಸುಭಿತ್ ಎನ್.ಆರ್, ಸುಧಾಕರ ಶೆಟ್ಟಿ ಮುಡಾರು, ಉಮೇಶ್ ರಾವ್ ಬಜಗೋಳಿ, ಸಿರಿಯಣ್ಣ ಶೆಟ್ಟಿ ಹಿರ್ಗಾನ, ಉದಯ ಶೆಟ್ಟಿ ಕುಕ್ಕುಂದೂರು, ಅನಿಲ್ ಪೂಜಾರಿ ಕುಕ್ಕುಂದೂರು, ಚೇತನ್ ಶೆಟ್ಟಿ ಕೊರಳ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಸೂರಜ್ ಶೆಟ್ಟಿ ನಕ್ರೆ, ಮಲಿಕ್ ಅತ್ತೂರು, ಮಂಜುನಾಥ ಜೋಗಿ, ಅನಿತಾ ಡಿಸೋಜ ಬೆಳ್ಮಣ್ ಭಾಗವಹಿಸಿದ್ದರು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷ ರಾಜೇಂದ್ರ ದೇವಾಡಿಗ ವಂದಿಸಿದರು. ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು.
Highlights - 82 ಯುನಿಟ್ ರಕ್ತ ಸಂಗ್ರಹ, ರಕ್ತದಾನಿಗಳಿಗೆ ಸಸಿ, ಸರ್ಟಿಫಿಕೇಟ್ ನೀಡಿ ಗೌರವ ಜರಿಗುಡ್ಡೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಆರ್ಥಿಕ ಸಹಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.