ಕಾರ್ಕಳ: ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಗ್ರವಾದಿಗಳ ಸಹೋದರಿ ಎಂದ ಮಧ್ಯಪ್ರದೇಶದ ಸಚಿವರ ಹೇಳಿಕೆ ವಿರುದ್ಧ ಕಾರ್ಕಳ ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶವೇ ಗೌರವಿಸುವ ಸೇನೆಯ ಅತ್ಯುನ್ನತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಸಚಿವರನ್ನು ವಜಾಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ಸೇನೆಯಲ್ಲಿ ಹಲವು ಜಾತಿ, ಸಮುದಾಯ, ಧರ್ಮ, ಪ್ರಾಂತವಾರು ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ದೇಶ ರಕ್ಷಣೆಯ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇಂಥ ಸೇನೆಗೆ ಬಿಜೆಪಿ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಅವರ ಕೊಳಕು ಮನಃಸ್ಥಿತಿಗೆ ಸಾಕ್ಷಿಯಾಗಿದೆ. ಗಾಂಧಿ, ನೆಹರೂ, ಅಂಬೇಡ್ಕರ್ ಮೊದಲಾದ ರಾಷ್ಟ್ರನಾಯಕರನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದ ಬಿಜೆಪಿ ಈಗ ದೇಶದ ಸೈನಿಕರನ್ನೂ ಅವಹೇಳನ ಮಾಡುತ್ತಿದೆ. ಮಧ್ಯಪ್ರದೇಶದ ಸಚಿವರ ಹೇಳಿಕೆಯು ಸಮಸ್ತ ಬಿಜೆಪಿಯವರ ಮನಃಸ್ಥಿತಿಯಾಗಿದೆ. ಬಿಜೆಪಿಯ ರಾಷ್ಟ್ರ ವಿರೋಧಿ ಮನಃಸ್ಥಿತಿಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.