ಕಾರ್ಕಳ: ಕನಸು, ಛಲ, ಸ್ವಸಾಮರ್ಥ್ಯ, ಆತ್ಮವಿಶ್ವಾಸ ಇದ್ದಾಗ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಕಾರ್ಕಳ ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕಾದ ಸಮುದಾಯ ಭವನದಲ್ಲಿ ಗುರುವಾರ ನಡೆದ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ವಾರ್ಷಿಕ ಸಹಮಿಲನ ಹಾಗೂ ಪ್ರೇರಣಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸ್ವ ಉದ್ಯಮಕ್ಕೆ ಸೂಕ್ತವಾದ ಹಣಕಾಸು ನೆರವು ಲಭ್ಯವಿದ್ದು, ಅದರ ಉಪಯೋಗವನ್ನು ಪಡೆದುಕೊಂಡು ಯಶಸ್ವಿಯಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಸ್‌ಐ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಭೆಯ ಧರ್ಮಾಧ್ಯಕ್ಷ ಹೇಮಚಂದ್ರ ಕುಮಾರ್, ಸಂಸ್ಥೆ ಹುಟ್ಟು ಹಾಕುವುದು ಸುಲಭ ಆದರೆ ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫ್ರಾನ್ಸಿಸ್ ಡಿಸೋಜಾ ಪಲಿಮಾರು ಅವರಿಗೆ ವರ್ಷದ ಉದ್ಯಮಿ, ಲವೀಟಾ ಅಂದ್ರಾದೆ ಅವರಿಗೆ ಮಹಿಳಾ ಉದ್ಯಮಿ, ಅರುಣ್ ಸುಶೀಲ್ ಕೋಟ್ಯಾನ್ ಸುಭಾಷ್ ನಗರ ಅವರಿಗೆ ಯುವ ಉದ್ಯಮಿ ಹಾಗೂ ಜೋಸೆಫ್ ಲೋಬೊ ಶಂಕರಪುರ ಅವರಿಗೆ ಪ್ರಗತಿ ಪರ ಕೃಷಿಕ ಪ್ರೇರಣಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಡೊಲ್ಫಿ ಮಸ್ಕರೇನಸ್, ಲೂವಿಸ್ ಲೋಬೊ, ವಾಲ್ಟರ್ ಸಲ್ಡಾನಾ ಮತ್ತು ಜೆರಾಲ್ಡ್ ಫೆರ್ನಾಂಡಿಸ್ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಪ್ರಶಸ್ತಿ ವಿಜೇತರ ಪರವಾಗಿ ಫ್ರಾನ್ಸಿಸ್ ಡಿಸೋಜಾ ಮತ್ತು ಲವಿಟಾ ಅಂದ್ರಾದೆ ಅನಿಸಿಕೆ ಹಂಚಿಕೊಂಡರು.
ಹೊಸ ಸದಸ್ಯರ ಪರಿಚಯವನ್ನು ಜೀವನ್ ಸಾಲಿನ್ಸ್ ನೀಡಿದರೆ, ಸಾಧಕರ ವಿವರವನ್ನು ವಿಲ್ಸನ್ ಡಿಸೋಜಾ ನೀಡಿದರು. ಸಂಘಟನೆಯ ಅಧ್ಯಕ್ಷ ಸಂತೋಷ್ ಡಿಸಿಲ್ವಾ ಅಧ್ಯಕ್ಷತೆ ವಹಿಸಿದ್ದರು. ಅತ್ತೂರು ಸೇಂಟ್ ಲಾರೆನ್ಸ್ ಮೈನರ್ ಬಸಿಲಿಕಾದ ಆಲ್ಬನ್ ಡಿಸೋಜ, ಸಂಘಟನೆಯ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಕೋಶಾಧಿಕಾರಿ ಮ್ಯಾಕ್ಷಿಮ್ ಸಲ್ಡಾನಾ ಇದ್ದರು.
ಜಿತೇಂದ್ರ ಫುರ್ಟಾಡೊ ಸ್ವಾಗತಿಸಿದರು. ಆಲ್ವಿನ್ ಕ್ವಾಡ್ರಸ್ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.