ಕಾರ್ಕಳ: ತಾಲ್ಲೂಕಿನ ಎನ್ಎಂಎಎಂ ತಾಂತ್ರಿಕ ಕಾಲೇಜು, ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಸ್ಟೂಡೆಂಟ್ ಕ್ಲಬ್ ಸಹಯೋಗದಲ್ಲಿ ವಿಶ್ವ ಮಾನದಂಡಗಳ ದಿನ ಆಚರಿಸಲಾಯಿತು.
ಎಂಜಿನಿಯರಿಂಗ್, ತಂತ್ರಜ್ಞಾನದಲ್ಲಿ ಗುಣಮಟ್ಟ, ಸುರಕ್ಷತೆ ಖಚಿತ ಪಡಿಸಿಕೊಳ್ಳುವಲ್ಲಿ ಮಾನದಂಡಗಳ ನಿರ್ಣಾಯಕ ಪಾತ್ರದ ಬಗ್ಗೆ ತಿಳಿಸಲು ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಮೆಕ್ಯಾನಿಕಲ್, ಸಿವಿಲ್, ರೊಬೊಟಿಕ್ಸ್ ಆ್ಯಂಡ್ ಎಐ ವಿಭಾಗದ ವಿದ್ಯಾರ್ಥಿಗಳು, ಬೋಧಕರಿಗೆ ಕಾರ್ಯಕ್ರಮ ಆಯೋಜಿಸಲಾಯಿತು.
ನಿಟ್ಟೆ ತಾಂತ್ರಿಕ ಕಾಲೇಜು ಉಪ ಪ್ರಾಂಶುಪಾಲ, ಡೀನ್ ಐ. ರಮೇಶ್ ಮಿತ್ತಂತಾಯ ಮಾತನಾಡಿ, ಉತ್ಪನ್ನ ಸುರಕ್ಷತೆಯಿಂದ ಎಂಜಿನಿಯರಿಂಗ್ ಉತ್ಕೃಷ್ಟತೆಯ ತನಕ ಜೀವನದ ಪ್ರತಿಯೊಂದು ಅಂಶದಲ್ಲೂ ಮಾನದಂಡಗಳಿಗೆ ಮಹತ್ವವಿದೆ. ಕೈಗಾರಿಕೆಗಳು, ಗ್ರಾಹಕರಿಗೆ ಸಮಾನವಾಗಿ ಪ್ರಯೋಜನವಾಗುವ ಸಾರ್ವತ್ರಿಕ ಮಾನದಂಡಗಳ ವ್ಯವಸ್ಥೆ ರಚಿಸುವಲ್ಲಿ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮುಖ ಪಾತ್ರ ವಹಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿರಂಜನ್ ಎನ್. ಚಿಪ್ಳೂಣ್ಕಕರ್ ಮಾತನಾಡಿ, ಯುವಕರು ಮಾನದಂಡಗಳ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಅನುಸರಣೆಯ ಮಹತ್ವ ತಿಳಿದಿರಬೇಕು ಎಂದರು.
ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿ ನಾಯಕ ವೈಷ್ಣವ್ ಶೆಣೈ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಕ್ಲಬ್ ಮೆಂಟರ್ ಅನಂತಕೃಷ್ಣ ಸೋಮಯಾಜಿ ಬಿಐಎಸ್ ಕ್ಲಬ್ ಪರಿಚಯಿಸಿದರು. ವಿದ್ಯಾರ್ಥಿ ನಾಯಕರು, ಕ್ಲಬ್‌ನ ಪ್ರಮುಖ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮೆಂಟರ್ ಅನುಷಾ ಆರ್. ಶರತ್ ಸದಸ್ಯರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ವೈಷ್ಣವ್ ಶೆಣೈ, ಅನನ್ಯಾ ಶೆಟ್ಟಿ ಪಿ, ಅಕ್ಷರಾ, ಸುಮಿತ್ ಹೆಗ್ಡೆ ಅವರ ನಾಯಕತ್ವ ಗುರುತಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು. ಸಿವಿಲ್ ವಿಭಾಗದ ಕ್ಲಬ್ ಮೆಂಟರ್ ತನುಶ್ರೀ ಎ. ಹೆಗ್ಡೆ ವಿಜೇತರ ಪಟ್ಟಿ ವಾಚಿಸಿದರು. ರೊಬೊಟಿಕ್ಸ್ ಆ್ಯಂಡ್ ಎಐ ವಿಭಾಗದ ವಿದ್ಯಾರ್ಥಿ ನಾಯಕಿ ಅನನ್ಯಾ ಶೆಟ್ಟಿ ವಂದಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸದಸ್ಯೆ ಶ್ರೇಯಾ ಪ್ರಭು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.