ADVERTISEMENT

ಶಾಸಕರ ನಿಜ ಬಣ್ಣ ಬಯಲು: ಶುಭದ ರಾವ್

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 7:39 IST
Last Updated 6 ಆಗಸ್ಟ್ 2024, 7:39 IST

ಕಾರ್ಕಳ: ತಾಲ್ಲೂಕಿನ ಬೈಲೂರು ಪರಶುರಾಮನ ಕಂಚಿನ ಪ್ರತಿಮೆ ವಿಚಾರವಾಗಿ ಜನತೆಗೆ ನಿರಂತರ ಸುಳ್ಳು ಹೇಳುತ್ತಿದ್ದ ಶಾಸಕರ ನಿಜ ಬಣ್ಣ ಪೊಲೀಸ್ ತನಿಖೆಯಿಂದ ಬಯಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದು ಅಲ್ಲ ಎಂಬುದು ಪೊಲೀಸರು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಬಿಡಿ ಭಾಗಗಳಿಂದ ಬಹಿರಂಗವಾಗುತ್ತದೆ. ಬೆಟ್ಟದ ಮೇಲೆ ಎರಡು ಕಾಲುಗಳ ಮೇಲೆ ಅರ್ಧ ಭಾಗ ನಿಂತಿರುವಾಗ ವಶಪಡಿಸಿಕೊಂಡಿರುವ ಬಿಡಿ ಭಾಗಗಳಲ್ಲೂ ಎರಡು ಕಾಲು ಇದ್ದು ಪ್ರತಿಮೆಗೆ ನಾಲ್ಕು ಕಾಲು ಇರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ‌ಮೂಡಿದೆ ಎಂದರು.

ಶಾಸಕರು ಇನ್ನಾದರೂ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಬೇಕು. ಅವರ ತಕ್ಷಣ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಿದ್ದತೆ ನಡೆಸಲಾಗುವುದು ಎಂದಿದ್ದಾರೆ.

ADVERTISEMENT

ಪ್ರತಿಮೆ ನಕಲಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಪ್ರತಿಮೆ ಪೂರ್ಣಗೊಂಡ ಬಗ್ಗೆಯಾಗಲಿ, ಅಲ್ಲಿಂದ ಇಲ್ಲಿಗೆ ತಂದಿರುವ ಬಗ್ಗೆಯಾಗಲಿ ಯಾವುದೇ ದಾಖಲೆಗಳು ಯಾರ ಬಳಿಯೂ ಇಲ್ಲ. ಚುನಾವಣೆಯ ದೃಷ್ಟಿಯಿಂದ ತುರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಮೆ ನಿರ್ಮಾಣವಾಗದ ಕಾರಣ ಪೈಬರ್ ಪ್ರತಿಮೆಯನ್ನು ತಂದು ಉದ್ಘಾಟಿಸಲಾಗಿದೆ. ಅದರ ನಿಜ ಬಣ್ಣ ಬಯಲಾದಾಗ ರಾತ್ರಿಯಲ್ಲಿ ಅದನ್ನು ಕೊಂಡೊಯ್ದು ಪ್ರತಿಮೆಯ ರೂಪ ಬದಲಾವಣೆ ಇದೆ ಎಂದು ನಂಬಿಸಲಾಗಿದೆ ಎಂದು ಹೇಳಿದ್ದಾರೆ.

ಈಗ ವಶಪಡಿಸಿಕೊಂಡಿರುವ ಭಾಗಗಳು ಉದ್ಘಾಟನೆಯ ನಂತರ ತಯಾರಾದ ಭಾಗಗಳು ಎಂದು ಅಲ್ಲಿ ಸಿಕ್ಕಿರುವ ನಾಲ್ಕು ಕಾಲುಗಳಿಂದ ಸಾಬೀತಾಗಿದೆ. ಒಂದು ವೇಳೆ ಈಗ ಬೆಟ್ಟದ ಮೇಲಿರುವ ಪ್ರತಿಮೆ ಕಂಚಿನದ್ದೇ ಆಗಿದ್ದರೆ ಮತ್ತೊಮ್ಮೆ ಕಾಲುಗಳನ್ನು ತಯಾರಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿ ಪ್ರತಿಮೆಯ ಮುಖದ ಭಾಗ ಸಂಪೂರ್ಣ ಬದಲಾಗಿದ್ದು ಅಂದಿನ ಮುಖಕ್ಕೆ ಹೋಲಿಕೆಯೇ ಇಲ್ಲ ಇದು‌ ನಕಲಿ ಪ್ರತಿಮೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದಿದ್ದಾರೆ.

ಪ್ರತಿಮೆ ನಿರ್ಮಾತೃ ಕೃಷ್ಣನಾಯ್ಕ್ ಮಹಾನ್ ಸುಳ್ಳುಗಾರ ಇಲ್ಲವಾದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಅಗತ್ಯವೇನಿದೆ. ಈಗ ಜಾತಿ ಮತ್ತು ಧರ್ಮವನ್ನು ಎಳೆದು ತಂದು ಕೋಮು ಗಲಭೆಯ ಹುನ್ನಾರ ನಡೆಸುತ್ತಿದ್ದಾರೆ ಅವರ ವಿರುದ್ದ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಬಹಿರಂಗವಾಗಲೇ ಬೇಕು, ಸತ್ಯವನ್ನು ತಿಳಿಸಲು ಪ್ರಯತ್ನಪಟ್ಟಾಗ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಕೇಸು ದಾಖಲಿಸಿ ಬೆದರಿಸಲಾಯಿತು, ಅನ್ಯಾಯದ ವಿರುದ್ದ ಮಾತನಾಡಿದವರನ್ನು ಅವಮಾನಿಸಲಾಯಿತು. ಅದರೆ ಸತ್ಯಕ್ಕೆ ಗೆಲುವಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.