ADVERTISEMENT

ಕುಂದಾಪುರ ಕ್ಷೇತ್ರ | ಬಿಜೆಪಿಯಲ್ಲಿ ಶಾಸಕರ ಪರ ಒಲವು; ಕಾಂಗ್ರೆಸ್‌ನಲ್ಲಿ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 19:30 IST
Last Updated 10 ಡಿಸೆಂಬರ್ 2022, 19:30 IST
   

ಕುಂದಾಪುರ: ಒಂದೆಡೆ ಮಲೆನಾಡು, ಇನ್ನೊಂದೆಡೆ ಅರಬ್ಬಿ ಸಮುದ್ರ, ಮದ್ಯದಲ್ಲಿ ಕೃಷಿ-ಗದ್ದೆಗಳ ಒಡಲನ್ನು ಹೊಂದಿರುವ ಕುಂದಾಪುರ ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ವಿಸ್ತಾರವಾದ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದೆ.

ಕ್ಷೇತ್ರದ ವಿಸ್ತಾರ:ಕ್ಷೇತ್ರ ಪುನರ್ ವಿಂಗಡನೆಯ ಬಳಿಕ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ವಿಂಗಡಣೆಯಾದಾಗ ಅಲ್ಲಿನ ಬಹುಪಾಲು ಕ್ಷೇತ್ರಗಳು ಕುಂದಾಪುರ ವಿಧಾಸಭಾ ಕ್ಷೇತ್ರ ಸೇರಿದವು. ಹಂಗಾರಕಟ್ಟೆಯಿಂದ ಕೋಡಿ ವರೆಗಿನ ಉದ್ದನೆಯ ಕರಾವಳಿ ಭಾಗಗಳು, ಮಾಬುಕೊಳದಿಂದ ಹೇರಿಕುದ್ರುವರೆಗಿನ ರಾಷ್ಟ್ರೀಯ ಹೆದ್ದಾರಿ, ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ವರಾಹಿ ಕಾಲುವೆ ಹರಿಯುವ ಮಲೆನಾಡಿನ ಬಹುಪಾಲು ಗ್ರಾಮಗಳು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದೆ.

ಜಾತಿ ಲೆಕ್ಕಾಚಾರ:69 ಗ್ರಾಮಗಳನ್ನು ಹೊಂದಿರುವ ಕುಂದಾಪುರ ಕ್ಷೇತ್ರದಲ್ಲಿ 218 ಮತಗಟ್ಟೆಗಳಿವೆ. ಬಿಲ್ಲವರು, ಬಂಟರು, ಮೀನುಗಾರರು (ಮೊಗವೀರರು ಹಾಗೂ ಕೊಂಕಣ ಖಾರ್ವಿ) ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು (ಮುಸ್ಲಿಂ, ಕ್ರೈಸ್ತ, ಜೈನ್ ಹಾಗೂ ಸಿಖ್), ಕ್ಷತ್ರೀಯ (ರಾಮಕ್ಷತ್ರಿಯ ಹಾಗೂ ಸೋಮ ಕ್ಷತ್ರೀಯ), ಬ್ರಾಹ್ಮಣ (ಬ್ರಾಹ್ಮಣ, ಜಿಎಸ್‌ಬಿ, ಆರ್‌ಎಸ್‌ಬಿ, ದೈವಜ್ಞ), ದೇವಾಡಿಗರು, ವಿಶ್ವಕರ್ಮರು, ಶೆಟ್ಟಿಗಾರರು, ಜೋಗಿ, ಬಳೆಗಾರರು, ಗೊಲ್ಲ ಸಮುದಾಯದ ಮತದಾರರು ಇದ್ದಾರೆ. ಜತೆಗೆ ಇತರ ಜಾತಿಗಳ ಮತಗಳು ಇದೆ.

ADVERTISEMENT

ಚುನಾವಣಾ ತಾಲೀಮು:ಮುಂಬರುವ ಚುನಾವಣೆಗೆ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಕಾಂಗ್ರೆಸ್ ತಯಾರಿ ಆರಂಭಿಸಿವೆ. ಕ್ರೀಡೋತ್ಸವ, ವಾರ್ಷಿಕೋತ್ಸವ, ಕಂಬಳ, ಜಾತ್ರೆ, ದಿಪೋತ್ಸವ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರ ಜಾಹೀರಾತು ಫಲಕಗಳು ರಾರಾಜಿಸುತ್ತಿದ್ದು ಚುನಾವಣಾ ಕಣವನ್ನು ರಂಗೇರಿಸುತ್ತಿವೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿತರು:ಬಿಜೆಪಿಯಲ್ಲಿ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಮುಂದಿನ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿ ಎನ್ನುವ ಪ್ರಬಲ ಮಾತುಗಳು ಕೇಳಿ ಬರುತ್ತಿದೆ. 1999ರಲ್ಲಿ ಕುಂದಾಪುರ ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕರಾದ ಹಾಲಾಡಿ, 2004, 2008, 2013 ಹಾಗೂ 2018 ಐದು ಬಾರಿ ಗೆದ್ದಿದ್ದಾರೆ.

ಪಕ್ಷ ಸಚಿವ ಸ್ಥಾನ ಕೊಡುವುದಾಗಿ ಕರೆಸಿ ನಿರಾಕಿಸಿತು ಎನ್ನುವ ಕಾರಣಕ್ಕೆ 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದವರು ಹಾಲಾಡಿ ಶ್ರೀನಿವಾಸ ಶೆಟ್ಟಿ. ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಿರುವ ಹಾಲಾಡಿ ಸರಳತೆಯ ಕಾರಣಕ್ಕೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಪೈಪೋಟಿ:ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಮೂಲಕ ವಿಧಾನಮಂಡಲ ಪ್ರವೇಶಿಸಿದ ಬಳಿಕ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಈವರೆಗೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿಲ್ಲ. ಹಿಂದೆ ಕಾಂಗ್ರೆಸ್‌ ಭದ್ರ ಕೋಟೆಯಾಗಿದ್ದ ಕುಂದಾಪುರ ಸದ್ಯ ಬಿಜೆಪಿ ಹಿಡಿತದಲ್ಲಿದೆ.

ಈ ಬಾರಿ ಕಾಂಗ್ರೆಸ್‌ನಿಂದ ಕೊಳ್ಕೆಬೈಲ್ ಕಿಶನ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ ಪೂಜಾರಿ ಬೀಜಾಡಿ ಹಾಗೂ ಶ್ಯಾಮಲಾ ಭಂಡಾರಿ ಹೆಸರುಗಳು ಮುಂಚೂಣಿಯಲ್ಲಿವೆ.

ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೊಳ್ಕೆಬೈಲ್ ಕಿಶನ್ ಹೆಗ್ಡೆ ಯುವ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಗುತ್ತಿಗೆದಾರ ದಿನೇಶ್ ಹೆಗ್ಡೆ ಮೊಳಹಳ್ಳಿ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರು. ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಬ್ಲಾಕ್‌ ಕಾಂಗ್ರೆಸ್ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರಾಗಿರುವ ಅನುಭವ ಇದೆ.

ಸಹಕಾರಿ ಹಾಗೂ ಸಾಮಾಜಿಕ ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅಶೋಕ ಪೂಜಾರಿ ಬೀಜಾಡಿ ಹಿಂದೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದರು. ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ತಾಲ್ಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅನುಭವ ಇದೆ.

ವೃತ್ತಿಯಲ್ಲಿ ವಕೀಲೆಯಾಗಿರುವ ಶ್ಯಾಮಲಾ ಭಂಡಾರಿ ಹಿಂದೆ ಪಕ್ಷದ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆದರೆ ಫಲ ಸಿಕ್ಕಿರಲಿಲ್ಲ. ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಉಳಿದ ಪಕ್ಷಗಳ ಸ್ಪರ್ಧೆ:ಹಿಂದೆ ಜನತಾ ಪರಿವಾರದ ಶಾಸಕರನ್ನು ನೀಡಿದ್ದ ಕುಂದಾಪುರ ಕ್ಷೇತ್ರದಲ್ಲಿ ಜನತಾ ಪರಿವಾರದ ಬಲ ಕುಂದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಬಲವಾದ ಬೇರು ಹಾಗೂ ಸಂಘಟನೆ ಶಕ್ತಿ ಇರುವುದು ಅವಿಭಜಿತ ಕುಂದಾಪುರ ತಾಲ್ಲೂಕಿನಲ್ಲಿ. ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸದಿದ್ದರೂ ಫಲಿತಾಂಶದ ಮೇಲೆ ಪ್ರಭಾವ ಬೀರುವಲ್ಲಿ ಶಕ್ತರಾಗಿರುವುದು ನಿಜ.

ಈಚೆಗೆ ಕುಂದಾಪುರದಲ್ಲಿ ನಡೆದ ಕಾರ್ಮಿಕ ಸಂಘಟನೆಯ ಸಮ್ಮೇಳನದ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಕಮ್ಯುನಿಸ್ಟ್ ಪಕ್ಷದಿಂದ ಈ ಬಾರಿಯ ಚುನಾವಣೆಗೆ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆಗಳು ಇದೆ.

ಆಮ್ ಆದ್ಮಿ, ಕೆಆರ್‌ಎಸ್, ಹಾಗೂ ಎಸ್‌ಡಿಪಿಐ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುವ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.

ಕುಂದಾಪುರ ಕ್ಷೇತ್ರದ ಒಟ್ಟು ಮತದಾರರು: 2,03,705
ಮಹಿಳಾ ಮತದಾರರು: 1,05,897
ಪುರುಷ ಮತದಾರರು: 97,807
ಲಿಂಗತ್ವ ಅಲ್ಪಸಂಖ್ಯಾತರು: 1

2008ರ ಚುನಾವಣಾ ಫಲಿತಾಂಶ
ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ):71,695
ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್): 46,612
ಗೆಲುವಿನ ಅಂತರ:25,083

2012ರ ಫಲಿತಾಂಶ
ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ):80,593
ಮಲ್ಯಾಡಿ ಶಿವರಾಮ್ ಶೆಟ್ಟಿ ( ಕಾಂಗ್ರೆಸ್):39,952
ಗೆಲುವಿನ ಅಂತರ:40,641

2018ರ ಫಲಿತಾಂಶ
ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ):1,03,434
ರಾಕೇಶ್ ಮಲ್ಲಿ (ಕಾಂಗ್ರೆಸ್):47,029
ಗೆಲುವಿನ ಅಂತರ:56,405

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.