ADVERTISEMENT

ಕಾಪು: ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗೆ ಶೀಘ್ರ ಸಭೆ

ಕಾಪು: ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:10 IST
Last Updated 26 ಆಗಸ್ಟ್ 2025, 5:10 IST
ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು
ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು   

ಕಾಪು (ಪಡುಬಿದ್ರಿ): ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಮಸ್ಯೆಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರ ನೇತೃತ್ವದಲ್ಲಿ ಶೀಘ್ರ ಸಭೆ ಕರೆಯಲಾಗುವುದು. ಇಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು.

ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದ್ದು, ಟೋಲ್ ಸಿಬ್ಬಂದಿ ಭಾಗವಹಿಸಿದ್ದರು. ‌

ಇದನ್ನು ಪ್ರಶ್ನಿಸಿದ ಪುರಸಭೆ ಸದಸ್ಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಬಹಳಷ್ಟು ಅಪಘಾತ ನಡೆಯುತ್ತಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬದಲು ಟೋಲ್ ಸಿಬ್ಬಂದಿ ಸಭೆಗೆ ಹಾಜರಾಗುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ಅಂಗನವಾಡಿ ಕಟ್ಟಡಗಳನ್ನು ಆಧುನಿಕ ಯುಗಕ್ಕೆ ತಕ್ಕಂತೆ ನಿರ್ಮಿಸಿ ಅಂಗನವಾಡಿ ಕೇಂದ್ರಗಳಲ್ಲಿ ಸ್ಮಾರ್ಟ್ ಎಜುಕೇಷನ್‌ಗೆ ಬೇಕಾದ ಆಟಿಕೆಗಳ ಜೋಡಣೆಯೊಂದಿಗೆ ಮಕ್ಕಳನ್ನು ಸೆಳೆಯುವಂತೆ ಮಾಡಬೇಕು ಎಂದು ಪುರಸಭೆ ಸದಸ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನ ಸೆಳೆದರು. ಅಧಿಕಾರಿ ಶೈಲಾ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಪುರಸಭೆಗೆ ಕೊಳಚೆ ನೀರು ಶುದ್ದೀಕರಣ ಘಟಕ ನಿರ್ಮಾಣ ಅತಿ ಅಗತ್ಯ. ಎಲ್ಲಾ ಕಡೆ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಘಟಕಕ್ಕೆ ₹4.34 ಕೋಟಿ ಅನುದಾನವಿದೆ. ಆದರೆ ಘಟಕ ನಿರ್ಮಾಣವಾಗದೆ ಇದ್ದಲ್ಲಿ ರಾಷ್ಟ್ರೀಯ ಹಸಿರು ಪೀಠ ಈ ಬಗ್ಗೆ ಗಂಭೀರವಾಗಿ ಎಚ್ಚರಿಸಿದ್ದು, ದಂಡ ಕಟ್ಟಬೇಕಾಗುತ್ತದೆ. ಅಲ್ಲದೆ ಅನುದಾನ ವಾಪಾಸು ಹೋಗುತ್ತದೆ. ನಿರ್ಮಾಣಕ್ಕೆ ಜಾಗದ ಕೊರತೆ ಇದ್ದು, ಖಾಸಗಿ ಹೊಟೇಲ್ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಖಾಸಗಿ ಜಾಗ ಖರೀದಿಸಿ ಘಟಕ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಾಧಿಕಾರಿ ನಾಗರಾಜ್ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಪುರಸಭೆ ಸದಸ್ಯರು ಹೆಚ್ಚು ಮುತವರ್ಜಿ ವಹಿಸಿ ಘಟಕ ನಿರ್ಮಾಣಕ್ಕೆ ಮುಂದಾಗಬೇಕು. ಪುರಸಭೆ ವ್ಯಾಪ್ತಿಯ ಕೊಳಚೆ ನೀರಿನ ಸಮಸ್ಯೆ ಪರಿಹರಿಸಬಹುದು ಎಂದರು. ಬಿಲ್ ಪಾವತಿಗೆ ಸಂಬಂಧಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಕೌನ್ಸಿಲರ್‌ಗಳಿಗೆ ಕರೆ ಮಾಡುವುದರಿಂದ ಸಭೆಯ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಸದಸ್ಯರು ಪ್ರಸ್ತಾಪಿಸಿದರು. ವಾರದ ಸಂತೆಯಲ್ಲಿ ಸೂಕ್ತ ಸ್ಥಳದ ಕೊರತೆಯಿಂದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಸೂಕ್ತ ಸ್ಥಳ ಗುರುತಿಸುವಂತೆ ಒತ್ತಾಯಿಸಿದರು. ಸಂತೆಯಲ್ಲಿ ವ್ಯಾಪಾರಿಗಳಿಂದ ಗುತ್ತಿಗೆದಾರರು ಹೆಚ್ಚುವರಿ ದರ ವಸೂಲು ಮಾಡುತ್ತಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದ ಬಿಲ್ ಪಾವತಿ ವಿಚಾರದಲ್ಲಿ ಅಧ್ಯಕ್ಷೆ ಹರಿಣಾಕ್ಷಿ, ಮುಖ್ಯಾಧಿಕಾರಿ ನಾಗರಾಜ್ ಅವರ ಮಧ್ಯೆ ಮಾತಿನ ಚಿಕಮಕಿ ನಡೆಯಿತು. ಪದೇ ಪದೇ ಅಧ್ಯಕ್ಷರು ಮುಖ್ಯಾಧಿಕಾರಿಗಳ ವಿರುದ್ಧ ಕಿಡಿಕಾರುತಿದ್ದು, ಪರಸ್ಪರ ಹೊಂದಾಣಿಕೆ ಕೊರತೆ ಇರುವುದು ಕಂಡುಬಂತು. ಈ ವೇಳೆ ಸದಸ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಿಮ್ಮಲ್ಲಿ ಸಮನ್ವಯತೆ ಕೊರತೆ ಇದ್ದು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಉಪಾಧ್ಯಕ್ಷೆ ಸರಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.