ADVERTISEMENT

ಉಡುಪಿ: 'ಜಾತ್ಯತೀತ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು'

ಕೆಂಪೇಗೌಡ ಜಯಂತಿಯಲ್ಲಿ ಒಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:17 IST
Last Updated 28 ಜೂನ್ 2022, 5:17 IST
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.   

ಉಡುಪಿ: ಮಣ್ಣಿನ ಕೋಟೆಗಳಿಂದ ಕೂಡಿದ್ದ ಹಳ್ಳಿಗಾಡು ಬೆಂದಕಾಳೂರನ್ನು ಸುಂದರ ನಗರವಾಗಿಸಿದ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಂಪೇಗೌಡರು ಶೌರ್ಯ, ಸಾಹಸ, ದೂರದೃಷ್ಟಿಗೆ ಹೆಸರಾಗಿದ್ದು ವಿಜಯನಗರ ಅರಸರ ಒಪ್ಪಿಗೆಯೊಂದಿಗೆ ಯಲಹಂಕದಲ್ಲಿ ಜಾತ್ಯತೀತ ನಗರ ನಿರ್ಮಿಸಿದರು. ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿಸದೆ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿದರು. ಒಂದು ಕಾಲದಲ್ಲಿ ಕಾಡಿನಿಂದ ಕೂಡಿದ್ದ ಬೆಂಗಳೂರು ಪ್ರದೇಶಕ್ಕೆ ಕೋಟೆಗಳನ್ನು ನಿರ್ಮಿಸಿ, ನಗರವನ್ನಾಗಿ ಮಾಡಿದರು ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಮಾತನಾಡಿ, ಕೆಂಪೇಗೌಡರನ್ನು ಜನರು ಇಂದಿಗೂ ನೆನೆಯಲು ಅವರ ವ್ಯಕ್ತಿತ್ವ ಹಾಗೂ ಅಸಾಧಾರಣ ಸಾಧನೆ ಕಾರಣವಾಗಿದೆ. ಬೆಂಗಳೂರು ಹಂತಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೆಂಪೇಗೌಡರ ಕುಟುಂಬವೂ ತ್ಯಾಗ ಬಲಿದಾನಕ್ಕೆ ಹೆಸರುವಾಸಿ ಎಂದರು.

ಕೆಂಪೇಗೌಡರ ಜೀವನಚರಿತ್ರೆ ಮತ್ತು ಸಾಧನೆಗಳ ಕುರಿತು ಮಾತನಾಡಿದ ಜಿಲ್ಲಾ ಒಕ್ಕಲಿಗ ಸಮುದಾಯದ ಅಧ್ಯಕ್ಷ ಸಿದ್ಧರಾಜು ‘ಬೇಟೆಯಾಡಲು ಬಂದ ನಾಯಿಯನ್ನೇ ಮೊಲ ಧೈರ್ಯದಿಂದ ಅಟ್ಟಿಸಿಕೊಂಡು ಹೋದ ದೃಶ್ಯ ಕೆಂಪೇಗೌಡರನ್ನು ವೀರಭೂಮಿ ಕಟ್ಟಲು ಪ್ರೇರೇಪಿಸಿತು ಎಂದು ಇತಿಹಾಸ ತಿಳಿಸುತ್ತದೆ.

ಕೆಂಪೇಗೌಡರು ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಗಡಿ ರೇಖೆ ಗುರುತಿಸಲು ಎತ್ತುಗಳಿಗೆ ನೇಗಿಲು ಕಟ್ಟಿ ಅವುಗಳು ನಿಲ್ಲುವ ಪ್ರದೇಶವನ್ನು ಗಡಿ ಪ್ರದೇಶ ಎಂದು ನಿರ್ಧರಿಸಿ ಬೆಂಗಳೂರು ನಗರ ನಿರ್ಮಿಸಿದರು ಎಂಬ ಕಥೆಗಳು ಇವೆ. ವೃತ್ತಿಗೆ ಪ್ರಾಶಸ್ತ್ಯ ಕೆಂಪೇಗೌಡರು ಕೋಟೆಗಳನ್ನು ನಿರ್ಮಿಸಿದರು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯವರ ಕೊಡಗೆಯೂ ಅವಿಸ್ಮರಣೀಯ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಒಕ್ಕಲಿಗೆ ಸಮುದಾಯದ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.