ADVERTISEMENT

ಉಡುಪಿ: ‘ಇನ್ನೊಬ್ಬರ ನೋವಿಗೆ ಸ್ಪಂದಿಸಿ’

ಶೇ 50 ರಿಯಾಯಿತಿಯಲ್ಲಿ ಡಯಾಲಿಸಿಸ್ ಚಿಕಿತ್ಸಾ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:00 IST
Last Updated 17 ನವೆಂಬರ್ 2025, 5:00 IST
ಕಾರ್ಯಕ್ರಮದಲ್ಲಿ ರೋಗಿಗಳಿಗೆ ಸಾಂಕೇತಿಕವಾಗಿ ಗುರುತಿನ ಕಾರ್ಡ್ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ರೋಗಿಗಳಿಗೆ ಸಾಂಕೇತಿಕವಾಗಿ ಗುರುತಿನ ಕಾರ್ಡ್ ವಿತರಿಸಲಾಯಿತು   

ಉಡುಪಿ: ‘ಪ್ರತಿಯೊಬ್ಬರು ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಬಡವರ ಕಣ್ಣೀರೊರೆಸುವ ಕಾರ್ಯಕ್ಕಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ’ ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.

ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ ಬಡರೋಗಿಗಳಿಗಾಗಿ ಶೇ 50 ರಿಯಾಯಿತಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ದಾನಿ ಜೋಸೆಫ್ ಮಿನೇಜಸ್ ಸಾಸ್ತಾನ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ, ಬೆಸಿಲ್ ಪಿಂಟೊ ಅವರ ಸಹಕಾರದೊಂದಿಗೆ ಹಮ್ಮಿಕೊಂಡಿರುವ, ಟ್ರಿನಿಟಿ ಮೆಡಿಕೇರ್ ಸರ್ವಿಸ್ ಯೋಜನೆಯ ಉದ್ಘಾಟನೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಭಾಂಗಣದಲ್ಲಿ ಭಾನುವಾರ ನೆರವೇರಿಸಿ ಅವರು ಮಾತನಾಡಿದರು.

ಬಡವರ ನೋವಿಗೆ ಎಷ್ಟು ನಾವು ದನಿಯಾಗುತ್ತೇವೆಯೋ ಅಷ್ಟು ನಾವು ದೇವರ ಪ್ರೀತಿಗೆ ಪಾತ್ರರಾಗುತ್ತೇವೆ. ಬಡವರ, ನೊಂದವರ ಕಣ್ಣೊರೆಸಿದಾಗ ಅಂತಹ ಸೇವೆ ದೇವರನ್ನು ತಲುಪುತ್ತದೆ ಎಂದರು.

ADVERTISEMENT

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಮಾತನಾಡಿ, ಸೇವೆಯ ಮೂಲಕ ಇನ್ನೊಬ್ಬರ ಜೀವನದಲ್ಲಿ ಸಂತೋಷವನ್ನು ಕಾಣುವುದು ಪ್ರತಿಯೊಬ್ಬರ ಉದ್ದೇಶವಾದಾಗ ಸಮಾಜದಲ್ಲಿ ಬಡವರೂ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಡಾ.ಮೇಘಾ ಪೈ ಮಾತನಾಡಿದರು. ಜೊಸೇಫ್ ಮಿನೇಜಸ್ ಸಾಸ್ತಾನ, ಬೆಸಿಲ್ ಪಿಂಟೊ ದಂಪತಿ ಹಾಗೂ ಸ್ನೇಹಾಲಯ ಆಶ್ರಮದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು.

ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ವಾಗ್ಮಿ ರಫೀಕ್ ಮಾಸ್ಟರ್ ಮಂಗಳೂರು, ಕಥೊಲಿಕ್ ಸಭಾ ಉಡುಪಿ ಪ್ರದೇಶ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಉರ್ಬಾನ್ ಲೂವಿಸ್ ಇದ್ದರು.

ರೊನಾಲ್ಡ್ ಆಲ್ಮೇಡಾ ಸ್ವಾಗತಿಸಿದರು. ಜೊಯೇಲ್ ಆಲ್ಮೇಡಾ ವಂದಿಸಿದರು. ಆಲ್ವಿನ್ ಅಂದ್ರಾದ್ರೆ ನಿರೂಪಿಸಿದರು.

ಉಡುಪಿ ಜಿಲ್ಲಾ ವ್ಯಾಪ್ತಿಯ ನಿಗದಿತ ಆಸ್ಪತ್ರೆಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಕಲ್ಯಾಣಪುರ ಸಂತೆಕಟ್ಟೆಯ ಗೊರೆಟ್ಟಿ ಆಸ್ಪತ್ರೆ ಮತ್ತು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಮತ್ತು ಕುಂದಾಪುರದ ನಿಗದಿತ ಆಸ್ಪತ್ರೆಗಳಿಗೆ ಕೂಡ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ರೋಗಿಗಳಿಗೆ ಸಾಂಕೇತಿಕವಾಗಿ ಗುರುತಿನ ಕಾರ್ಡ್ ವಿತರಣೆ ರಕ್ತದಾನಿಗಳ ವಿವರವುಳ್ಳ ಡೈರಕ್ಟರಿ, ಸಂಗೀತ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.