
ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರದಲ್ಲಿ ಗುರುವಾರ ನಡೆದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮರಥೋತ್ಸವಕ್ಕೆ ಊರ ಹಾಗೂ ಪರವೂರಿನಿಂದ ಬಂದಿದ್ದ ಭಕ್ತರು ಸಾಕ್ಷಿಯಾದರು.
ವೃಶ್ಚಿಕ ಮಾಸದಂದು ನಡೆಯುವ ಶ್ರೀಮಹತೋಭಾರ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವವನ್ನು ಈ ಭಾಗದ ಆಸುಪಾಸಿನ ಗ್ರಾಮಸ್ಥರು ವಾಡಿಕೆಯಲ್ಲಿ ‘ಕೊಡಿ ಹಬ್ಬ’ ಎಂದು ಕರೆಯುತ್ತಾರೆ. ಈ ಬಾರಿಯ ಕೊಡಿ ಹಬ್ಬಕ್ಕಾಗಿ ಗುರುವಾರ ನಸುಕಿನಿಂದಲೇ ಧಾರ್ಮಿಕ ಆಚರಣೆಯಲ್ಲಿ ತೊಡಗಿದ ಭಕ್ತರು, ಬೆಳಿಗ್ಗೆ 11.21ರ ಮಕರ ಲಗ್ನದ ಸುಮುಹೂರ್ತದಲ್ಲಿ ನಡೆದ ಮನ್ಮಹಾರಥೋತ್ಸವದ ಆರೋಹಣವನ್ನು ಕಣ್ಮನದಲ್ಲಿ ತುಂಬಿಕೊಂಡರು. ತಂತ್ರಿ ಪ್ರಸನ್ನಕುಮಾರ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಅರ್ಚಕರಾದ ಪರಮೇಶ್ವರ ಐತಾಳ್, ವಿಶ್ವೇಶ್ವರ ಉಡುಪ, ಶ್ರೀಪತಿ ಐತಾಳ್ ಇದ್ದರು.
ಬೆಳಿಗ್ಗೆ ಸೂರ್ಯ ಉದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ಧ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು, ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚೆಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ, ದೇವರ ದರ್ಶನ ಪಡೆದು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದರು. ಬೆಳಿಗ್ಗೆ ದೇವಸ್ಥಾನದಿಂದ ಋತ್ವಿಜರು, ಪಂಚ ವಾದ್ಯಗಳು, ಪಾರಂಪರಿಕ ಸೂರ್ಯ ವಾದ್ಯ, ಚಂಡೆ, ತಟ್ಟಿರಾಯ ಸಹಿತ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ, ಕೋಟಿಲಿಂಗೇಶ್ವರ ಗೋಳೆ (ಮುಖವಾಡ), ತಾಂಡವೇಶ್ವರ ಹಾಗೂ ಬಿದಿರಿನ ಕೊಡಿಯನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿದ ಬಳಿಕ, ಹಣ್ಣುಕಾಯಿ ಸೇವೆ ಸಲ್ಲಿಸಿದ ನಂತರ ಮಂಗಳಾರತಿ ನೆರವೇರಿಸಲಾಯಿತು. ರಥದ ಚಕ್ರಕ್ಕೆ ಕಾಯಿ ಒಡೆಯುವ ಸೇವೆ ಮುಗಿಸಿ, ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ಆಚರಿಸಲಾಯಿತು. ನೆರೆದಿದ್ದ ಭಕ್ತರು ಜಯಘೋಷ ಕೂಗಿದರು.
ದೇವರನ್ನು ರಥದಲ್ಲಿ ಕುಳ್ಳಿರಿಸಿ, ಅರ್ಚಕರು ಆರತಿ ಬೆಳಗುತ್ತಿದ್ದಂತೆ ವಾಡಿಕೆಯಂತೆ ಆಕಾಶದಲ್ಲಿ ಗರುಡ ಕಾಣಿಸಿಕೊಂಡು ರಥಕ್ಕೆ ಪ್ರದಕ್ಷಿಣೆ ಹಾಕಿದೆ. ಪಿ. ರವಿರಾಜ್ ಭಟ್ ನಂದಳಿಕೆ ಅವರು, ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಕುಳ್ಳಿರಿಸಿಕೊಂಡು, ಚಂಡೆಯ ನಾದಕ್ಕೆ ತಾಂಡವ ನೃತ್ಯ ಸೇವೆ ಸಲ್ಲಿಸಿದರು. ನೆರೆದಿದ್ದ ಭಕ್ತರು ಹರಹರ ಮಹಾದೇವ ಎನ್ನುವ ಉದ್ಘೋಷ ಮಾಡಿದರು. ಕೊಡಿ ಹಬ್ಬಕ್ಕೆ ಬಂದ ನವ ವಿವಾಹಿತರು ಬದುಕಿನ ಕುಡಿಯೊಡಿಯುತ್ತದೆ ಎನ್ನುವ ನಂಬಿಕೆಯಿಂದ ಕೋಟಿತೀರ್ಥದಲ್ಲಿ ಸ್ನಾನಮಾಡಿ, ದೇವರ ದರ್ಶನ ಪಡೆದು ‘ಕಬ್ಬಿನ ಕೊಡಿ’ಯನ್ನು ಮನೆಗೆ ಒಯ್ಯುವ ದೃಶ್ಯಗಳು ಸಾಮಾನ್ಯವಾಗಿದ್ದವು. ಸಂಜೆಯ ಸುಮುಹೂರ್ತದಲ್ಲಿ ಬ್ರಹ್ಮರಥದ ಅವರೋಹಣ ನಡೆಸಿ, ಉತ್ಸವ ಮೂರ್ತಿಯನ್ನು ಮರಳಿ ದೇವಸ್ಥಾನಕ್ಕೆ ಒಯ್ಯಲಾಯಿತು.
ಜಾತ್ರೆಯ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದವು. ಕುಂದಾಪುರದಿಂದ ಕೋಟೇಶ್ವರದವರೆಗೆ ಹಾಗೂ ತೆಕ್ಕಟ್ಟೆಯಿಂದ ಕೋಟೇಶ್ವರದವರೆಗೆ ದಾರಿಯ ಇಕ್ಕೆಲಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಅಂಗಡಿಗಳು, ಮನರಂಜನಾ ಪಾರ್ಕ್‌ಗಳು ಜಾತ್ರೆಯ ಆಕರ್ಷಣೆ ಹೆಚ್ಚಿಸಿತ್ತು. ಜಾತ್ರೆಗೆ ಬರುವ ಭಕ್ತರಿಗಾಗಿ ಉಚಿತ ಪಾನಕ ಹಾಗೂ ಪಾನೀಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಬುಧವಾರ ರಾತ್ರಿಯಿಂದಲೇ ಭಾರಿ ಸಂಖ್ಯೆಯ ಜನಸ್ತೋಮ ಇತ್ತು. ವಾಹನ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ಡಾ.ಸುಧಾಕರ ನಂಬಿಯಾರ್, ಉಷಾ ಬಂಗೇರಾ, ರಾಜೀವ್ ಶೆಟ್ಟಿ, ಗಣಪ ಪೂಜಾರಿ, ಗಾಯತ್ರಿ ಆಚಾರ್, ನೇತ್ರಾವತಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ ಚಾತ್ರಬೆಟ್ಟು, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಕೋಟೇಶ್ವರ ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯ ಲೋಕೇಶ್ ಅಂಕದಕಟ್ಟೆ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಸ್ಥಳೀಯ ಪ್ರಮುಖರಾದ ರಮೇಶ್ ಭಟ್, ಗುರುರಾಜ್ ಇಂಜಿನಿಯರ್, ಬುದ್ಧರಾಜ್ ಶೆಟ್ಟಿ ಮಾರ್ಕೋಡು, ಸುರೇಶ್ ಬೆಟ್ಟಿನ್, ಶ್ರೀನಿವಾಸ್ ರಾವ್ ಗೋಪಾಡಿ ಇದ್ದರು.
ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ, ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಭೀಮಾಶಂಕರ್, ವಿನಯ್ ಕೋರ್ಲಹಳ್ಳಿ, ಪ್ರವೀಣ್ ಮುಂತಾದವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ರಥಕ್ಕೆ ಪ್ರದಕ್ಷಿಣೆ ಹಾಕಿದ ಗರುಡ ಹಣ್ಣುಕಾಯಿ ಸೇವೆ ಸಲ್ಲಿಸಿದ ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.