ADVERTISEMENT

ಕೊಲ್ಲೂರು ದೇವಸ್ಥಾನದಲ್ಲಿ ಹಣ ದುರ್ಬಳಕೆ ಆರೋಪ

ಆರೋಪಗಳಲ್ಲಿ ಹುರುಳಿಲ್ಲ: ಅವ್ಯವಹಾರ ನಡೆದಿಲ್ಲ: ಕೊಲ್ಲೂರು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:21 IST
Last Updated 9 ಮಾರ್ಚ್ 2021, 17:21 IST

ಉಡುಪಿ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ದೇವನಿಧಿ ದುರ್ಬಳಕೆಯಾಗಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಗಂಭೀರ ಆರೋಪ ಮಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಕೊಲ್ಲೂರು ದೇವಸ್ಥಾನದ ವ್ಯವಹಾರಗಳ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಲೆಕ್ಕ ಪರಿಶೋಧಕರ ವರದಿಯನ್ವಯ ದೇವಸ್ಥಾನದಲ್ಲಿ ₹ 21.8 ಕೋಟಿ ವ್ಯವಹಾರ ಸಂಶಯಾಸ್ಪದವಾಗಿದೆ. ಈ ಕುರಿತು ತನಿಖೆಯಾಗಬೇಕು, ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.‌

ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಭಕ್ತರು ನೀಡಿದ ಬಂಗಾರ ಬೆಳ್ಳಿಯ ಆಭರಣಗಳ ವಿವರವನ್ನು ನಿಯಮಾನುಸಾರ ನೋಂದಣಿ ಮಾಡಿಲ್ಲ. 2018–19ರವರೆಗೆ ದೇಣಿಗೆ ಸ್ವೀಕರಿಸಿದ ಆಭರಣಗಳ ಪಟ್ಟಿಯನ್ನು ಸರ್ಕಾರಿ ಲೆಕ್ಕ ಪರಿಶೋಧಕರಿಗೆ ಸಲ್ಲಿಕೆ ಮಾಡಿಲ್ಲ. ಸುಳ್ಳು ಸಿಬ್ಬಂದಿ ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ಆರೋಪಿಸಿದರು.

ADVERTISEMENT

ಲಕ್ಷಾಂತರ ರೂಪಾಯಿಯನ್ನು ದೂರವಾಣಿ ಬಿಲ್ ಪಾವತಿಗೆ ಬಳಸಲಾಗಿದೆ, ವಿದ್ಯಾರ್ಥಿಗಳಿಗೆ ದೇವಸ್ಥಾನದಿಂದ ನೀಡಿದ ಸಮವಸ್ತ್ರದ ಬಿಲ್‌ಗಳು ಲಭ್ಯವಿಲ್ಲ ಎಂದು ದೂರಿದ ಗುರುಪ್ರಸಾದ್ ಗೌಡ, ಲೆಕ್ಕಪರಿಶೋಧಕರ ವರದಿಯನ್ವಯ ತನಿಖೆ ನಡೆಸಬೇಕು, ವ್ಯವಹಾರದ ಮಾಹಿತಿಯನ್ನು ದೇವಸ್ಥಾನದ ಜಾಲತಾಣದಲ್ಲಿ ಪ್ರಕಟಿಸಬೇಕು, ರಾಜ್ಯದ ಎಲ್ಲ ಸರ್ಕಾರಿಗೊಂಡ ದೇವಸ್ಥಾನಗಳನ್ನು ಭಕ್ತರ ವಶಕ್ಕೊಪ್ಪಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸುನೀಲ್ ಘನವಟ್‌, ಪ್ರಭಾಕರ್ ನಾಯಕ್, ಶ್ರೀನಿವಾಸ್‌, ಚಂದ್ರ ಮೊಗೇರ ಇದ್ದರು.

‘ಅವ್ಯವಹಾರ ನಡೆದಿಲ್ಲ’
ಕೊಲ್ಲೂರು ದೇವಸ್ಥಾನಕ್ಕೆ ಭಕ್ತರು ನೀಡಿರುವ ಬಂಗಾರವನ್ನು ಫೋಟೊ ದಾಖಲೆ ಸಹಿತ ಸುರಕ್ಷಿತವಾಗಿ ಲಾಕರ್‌ನಲ್ಲಿ ಇಡಲಾಗಿದೆ. 2016ರಲ್ಲಿ ರಿಜಿಸ್ಟರ್ ತೋರಿಸಿಲ್ಲ ಎಂಬ ಅಂಶ ಆಡಿಟ್‌ನಲ್ಲಿರುವುದರಿಂದ ಅವ್ಯವಹಾರದ ಆರೋಪ ಮಾಡಲಾಗಿದೆ. 2016ರಲ್ಲಿ ಮೂಲ ರಿಜಿಸ್ಟರ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ದಾಖಲೆಗಳು ದೇವಸ್ಥಾನದಲ್ಲಿ ಲಭ್ಯವಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್‌.ಪಿ.ಬಿ ಮಹೇಶ್‌ ತಿಳಿಸಿದ್ದಾರೆ.

ಶಾಲಾ ಯೂನಿಫಾರ್ಮ್‌ ಸೇರಿದಂತೆ ಎಲ್ಲ ವಸ್ತುಗಳನ್ನು ಇ–ಟೆಂಡರ್ ಮೂಲಕವೇ ಖರೀದಿಸಲಾಗುತ್ತಿದೆ. ₹ 1 ಲಕ್ಷದೊಳಗಿದ್ದರೆ ಮಾತ್ರ ಮ್ಯಾನ್ಯುಯಲ್‌ ಟೆಂಡರ್‌ ಮೂಲಕ ಖರೀದಿಸಲಾಗುವುದು. 2019–20ರವರೆಗೂ ದೇವಸ್ಥಾನಕ್ಕೆ ಸೇರಿದ ಅಂಗಡಿಗಳಿಂದ ಬಾಡಿಗೆ ಬಾಕಿ ಇಲ್ಲ. ಕೊರೊನಾ ಕಾರಣದಿಂದ 7 ತಿಂಗಳ ಬಾಡಿಗೆ ಬಿಡುವಂತೆ ಅಂಗಡಿ ಬಾಡಿಗೆದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಿಂದ 2020ರ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಮಾತ್ರ ಬಾಡಿಗೆ ವಸೂಲಿ ಬಾಕಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ನಿವಾಸದ ದೂರವಾಣಿ ಬಿಲ್‌ ಪಾವತಿ:2018ರಲ್ಲಿ ಜಿಲ್ಲಾಧಿಕಾರಿ ನಿವಾಸದ ₹ 23,363 ದೂರವಾಣಿ ಬಿಲ್‌ ಅನ್ನು ಕೊಲ್ಲೂರು ದೇವಸ್ಥಾನದಿಂದ ಪಾವತಿಸಲಾಗಿದೆ. ಕೆಲವು ಸರ್ಕಾರಿ ಸಿಬ್ಬಂದಿಯ ಸಂಬಳವನ್ನು ದೇವಸ್ಥಾನದ ನಿಧಿಯಿಂದ ನೀಡಲಾಗಿದೆ ಎಂದು ಗುರುಪ್ರಸಾದ್ ಗೌಡ ಆರೋಪಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿರುವ ದೇವಸ್ಥಾನದ ಆಡಳಿತ ಮಂಡಳಿ, ಜಿಲ್ಲಾಧಿಕಾರಿ ನಿವಾಸದ ದೂರವಾಣಿ ಬಿಲ್‌ ಅನ್ನು ಕೊಲ್ಲೂರು ದೇವಸ್ಥಾನದಿಂದ ಪಾವತಿಸಲಾಗುತ್ತಿಲ್ಲ. ಬದಲಾಗಿ ಹೋಂ ಆಫೀಸ್‌ ದೂರವಾಣಿ ಬಿಲ್‌ ಮಾತ್ರ ಪಾವತಿಸಲಾಗುತ್ತಿದೆ. ಮುಜರಾಯಿ ಇಲಾಖೆಯ ಹೊಣೆಯೂ ಜಿಲ್ಲಾಧಿಕಾರಿಗೆ ಸೇರಿದ್ದು, ಒಂದು ದೂರವಾಣಿ ಸಂಪರ್ಕ ದೇವಸ್ಥಾನದ ಹೆಸರಿನಲ್ಲಿದೆ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.