ADVERTISEMENT

ಬಿಜೆಪಿ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 14:19 IST
Last Updated 13 ಜುಲೈ 2019, 14:19 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ಸಚಿವ ಸಾ.ರಾ.ಮಹೇಶ್ ಹಾಗೂ ಬಿಜೆಪಿ ನಾಯಕ ಈಶ್ವರಪ್ಪ ಅವರ ಭೇಟಿ ಆಕಸ್ಮಿಕ. ರಾತ್ರಿ ಕಂಡ ಬಾವಿಗೆ ಹಲಗು ಬೀಳುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ನೆಪಗಳನ್ನು ಹೇಳದೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

105 ಶಾಸಕರು ಹಾಗೂ ಇಬ್ಬರು ಪಕ್ಷೇತ್ತರರ ಬಲವಿರುವ ಬಿಜೆಪಿಗೆ ಸಂಪೂರ್ಣ ಬಹುಮತ ಇದೆ. ಆದರೆ, ಸಾಲು ಸಾಲು ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದರು.

ADVERTISEMENT

ಸರ್ಕಾರ ಬೀಳುವುದು ಖಚಿತವಾದ ತಕ್ಷಣ ಸಚಿವ ರೇವಣ್ಣ ರಾತ್ರೋರಾತ್ರಿ 800 ಎಂಜಿನಿಯರ್‌ಗಳಿಗೆ ವರ್ಗಾವಣೆ ಹಾಗೂ ಮುಂಬಡ್ತಿ ನೀಡಿರುವುದು ಖಂಡನೀಯ. ಈ ಸಂಬಂಧ ತಕ್ಷಣ ಸಮಿತಿ ರಚಿಸಿ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಕೋಟ ತಿಳಿಸಿದರು.

ಕಾಂಗ್ರೆಸ್‌ ಜೆಡಿಎಸ್‌ ಮಧ್ಯೆ ಹೊಂದಾಣಿಕೆ ಇಲ್ಲ ಎಂಬ ವಿಚಾರ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದಕ್ಕೆ ಕಾಂಗ್ರೆಸ್‌ ನೆಲಕಚ್ಚಿದೆ ಎಂಬ ಸತ್ಯ ಸಿದ್ದರಾಮಯ್ಯ ಅವರಿಗೆ ಈಗ ಅರಿವಾಗಿದೆ ಎಂದು ಲೇವಡಿ ಮಾಡಿದರು.

ರಾಜೀನಾಮೆ ಕೊಟ್ಟ ಶಾಸಕರ ಮೇಲೆ ಎಸಿಬಿಯ ಮೂಲಕ ಒತ್ತಡ ಹಾಕುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಕೋಟ ಟೀಕಿಸಿದರು.

ರಾಜ್ಯದಲ್ಲಿ ಉಂಡು ಹೋದ ಕೊಂಡು ಹೋದ ಸರ್ಕಾರವಿದ್ದು, ರಾಜರಾಜೇಶ್ವರಿ ಕ್ಷೇತ್ರದ ಮೇಲ್ಸೇತುವೆ ಕಾಮಗಾರಿಯಲ್ಲಿ ಸಾವಿರಾರು ಕೋಟಿ ಕಮಿಷನ್‌ ದಂಧೆ ನಡೆದಿರುವ ಆರೋಪ ಇದೆ. ಖುದ್ದು ಕ್ಷೇತ್ರದ ಶಾಸಕ ಮುನಿರತ್ನ ಅವ್ಯವಹಾರದ ಆರೋಪ ಮಾಡಿದ್ದಾರೆ. ‌

ಜತೆಗೆ, ಬಿಡಿಎನಲ್ಲಿ ರೇವಣ್ಣ ಹಸ್ತಕ್ಷೇಪ ಮಾಡುತ್ತಾರೆ ಎಂದು ಬಿಡಿಎ ಅಧ್ಯಕ್ಷ ಸೋಮಶೇಖರ್ ಹೇಳಿದ್ದಾರೆ. ಕ್ಷೇತ್ರದ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ. ಹೀಗೆ, ಮೈತ್ರಿ ಸರ್ಕಾರ ಬಿದ್ದುಹೋಗಲಿ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರೇ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.