ADVERTISEMENT

ಪಕ್ಷದಲ್ಲಿ ನಾಯಕತ್ವದ ಯಾವುದೇ ಗೊಂದಲವಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಮಸ್ಯೆ ಬಗೆಹರಿಸಲು ಹೈಕಮಾಂಡ್ ಶಕ್ತ: ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 3:47 IST
Last Updated 21 ಜುಲೈ 2021, 3:47 IST
ಕುಂದಾಪುರ ಸಮೀಪದ ಕೋಡಿ-ಕನ್ಯಾಣ ರಸ್ತೆಯ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕುಂದಾಪುರ ಸಮೀಪದ ಕೋಡಿ-ಕನ್ಯಾಣ ರಸ್ತೆಯ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.   

ಕುಂದಾಪುರ: ‘ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ಸಚಿವರು, ಶಾಸಕರು ಹಾಗೂ ಪದಾಧಿಕಾರಿಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಎಲ್ಲರೂ ನಿಷ್ಠೆಯಿಂದ ಮಾಡುತ್ತಿದ್ದಾರೆ. ನಾಯಕತ್ವ ಸೇರಿದಂತೆ ಯಾವುದೇ ಪ್ರಮುಖ ವಿಚಾರಧಾರೆಗಳು ಬಂದಾಗ ಅದನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಹೈಕಮಾಂಡ್ ಇದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿಗೆ ಸಮೀಪದ ಕೋಟ- ಪಡುಕೆರೆ- ಕೋಡಿ- ಕನ್ಯಾಣದಲ್ಲಿ ಮಂಗಳವಾರ ನೂತನವಾಗಿ ನಿರ್ಮಿಸಲಾದ ಕಾಂಕ್ರೀಟ್‌ ರಸ್ತೆಯ ವೀಕ್ಷಣೆ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದರು.

ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಮುಖ್ಯಮಂತ್ರಿ ಆಗಿ ಸಮರ್ಥ ಆಡಳಿತ ನೀಡುತ್ತಿದ್ದಾರೆ. ಅವರ ಸೂಚನೆಯಂತೆ ನಮ್ಮ ಜಿಲ್ಲೆ ಹಾಗೂ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕಡೆಗೆ ಗಮನ ನೀಡುತ್ತಿದ್ದೇವೆ. ಬಿಜೆಪಿ ಸರ್ಕಾರದಿಂದ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಅದ್ಯತೆ ನೀಡಲಾಗಿದೆ ಎಂಬ ಅಂಶಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮರೆಮಾಚಬಾರದು ಎಂದರು.

ADVERTISEMENT

‘ನಾನು ಮೀನುಗಾರಿಕಾ ಸಚಿವನಾಗಿದ್ದ ವೇಳೆ ನನೆಗುದಿಗೆ ಬಿದ್ದಿದ್ದ ಹೆಜಮಾಡಿ ಕಿರು ಬಂದರು ನಿರ್ಮಾಣಕ್ಕಾಗಿ ₹181 ಕೋಟಿ ಅನುದಾನ ಬಿಡುಗಡೆ ಮಾಡಿ, ಮುಖ್ಯಮಂತ್ರಿಗಳಿಂದ ಶಿಲಾನ್ಯಾಸವನ್ನು ಮಾಡಲಾಗಿತ್ತು. ಹಲವು ಕಾರಣಗಳಿಂದಾಗಿ ವಿಳಂಭವಾಗಿದ್ದ ಕೋಡಿ ಕನ್ಯಾಣದಲ್ಲಿನ ಮೀನುಗಾರಿಕಾ ಜಟ್ಟಿಯ ಹೂಳೆತ್ತುವ ಕಾಮಗಾರಿಗೆ ಸಚಿವ ಅಂಗಾರ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕರಾವಳಿ ಶಾಸಕರ ಮನವಿ ಮೇರೆಗೆ ₹ 60 ಕೋಟಿ ಮಹಿಳಾ ಮೀನುಗಾರರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ 22,000 ಮಂದಿಗೆ ಉಪಯೋಗವಾಗಿದೆ. ತಾಂತ್ರಿಕ ಕಾರಣದಿಂದ ಯೋಜನೆಯಿಂದ ವಂಚಿತ ರಾದವರಿಗೂ ಯೋಜನೆ ಉಪಯೋಗ ದೊರಕಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಶಾಸಕ ಅಂಗಾರ ಅವರು ಮೀನುಗಾರಿಕಾ ಸಚಿವರಾದ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಉಳ್ಳಾಲದಿಂದ ಶಿರೂರುವರೆಗಿನ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕಾ ಇಲಾಖೆ ಹೆಚ್ಚು ಕಾಮಗಾರಿಗಳು ನಡೆದಿರುವುದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಇದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಕಾಳಜಿ ಹಾಗೂ ಪ್ರಯತ್ನಗಳಿವೆ. ಕಾಮಗಾರಿಗಳಲ್ಲಿ ಕಳಪೆಯಾಗಿರುವ ಕುರಿತು ದೂರುಗಳು ಬಂದಲ್ಲಿ, ಅದನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.