ADVERTISEMENT

ಕೋಟ: ತ್ರಿವಳಿ ಯಕ್ಷೋತ್ಸವ 17ರಿಂದ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:46 IST
Last Updated 14 ಏಪ್ರಿಲ್ 2025, 15:46 IST
ತುಳು ಕ್ಯಾಲೆಂಡರ್ ಅನ್ನು ಪತ್ರಿಕಾ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು
ತುಳು ಕ್ಯಾಲೆಂಡರ್ ಅನ್ನು ಪತ್ರಿಕಾ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು    

ಕೋಟ (ಬ್ರಹ್ಮಾವರ): ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಆಹ್ವಾನಿತ ತಂಡಗಳ 2 ದಿನದ ‘ತ್ರಿವಳಿ ಯಕ್ಷೋತ್ಸವ’ ಇದೇ 17 ಮತ್ತು 18ರಂದು ಕೋಟ ಮೂರ‍್ಕೈಯ ಹಂದೆ ಮಹಾವಿಷ್ಣು ವಿನಾಯಕ ದೇವಸ್ಥಾನದಲ್ಲಿ ಆಯೋಜಿಲಸಾಗಿದೆ.

17ರಂದು ಸಂಜೆ 5.30ಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಶಾಸಕ ಕಿರಣ ಕುಮಾರ ಕೊಡ್ಗಿ ಚಾಲನೆ ನೀಡುವರು. ಮುಖಂಡರಾದ ಜಯಪ್ರಕಾಶ ಹೆಗ್ಡೆ, ಉದ್ಯಮಿ ಮೊಳಹಳ್ಳಿ ದಿನೇಶ ಹೆಗ್ಡೆ, ಗೀತಾನಂದ ಫೌಂಡೇಷನ್‌ ಪ್ರವರ್ತಕ ಆನಂದ ಸಿ. ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಅಕಾಡೆಮಿಯ ರಿಜಿಸ್ಟ್ರಾರ್ ನಮೃತಾ ಎನ್, ಸದಸ್ಯ ಸಂಚಾಲಕ ರಾಘವ ಎಚ್. ಭಾಗವಹಿಸುವರು. ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಗುರು ದೇವದಾಸ ಕೂಡ್ಲಿ ಅವರನ್ನು ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಗುವುದು.

18ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕಸಾಪ ಬ್ರಹ್ಮಾವರ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷ ವಿಮರ್ಶಕ ಬೇಳೂರು ರಾಘವ ಶೆಟ್ಟಿ, ಯಕ್ಷ ಸಂಘಟಕ ಸುದರ್ಶನ ಉರಾಳ, ಹಂದೆ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಅಮರ ಹಂದೆ ಭಾಗವಹಿಸುವರು. ಮಕ್ಕಳ ಕ್ಷೇತ್ರದ ಯಕ್ಷ ಸಾಧಕ ಶ್ರೀಧರ ಹೆಬ್ಬಾರ್ ಕರ್ಜೆ ಅವರನ್ನು ಗೌರವಿಸಲಾಗುವುದು.

ADVERTISEMENT

ಕೋಟ ಕಲಾ ಪೀಠದಿಂದ ಬಡಗುತಿಟ್ಟು ‘ಮೈಂದ ದ್ವಿವಿಧ ಕಾಳಗ’, ಯಕ್ಷ ಆರಾಧನಾ ಕಿದಿಯೂರು ಅವರಿಂದ ಬಡಗುತಿಟ್ಟು ‘ಶಶಿಪ್ರಭಾ ಪರಿಣಯ’, ಮಂಗಳೂರು ಮಯೂರ ಪ್ರತಿಷ್ಠಾನದಿಂದ ತೆಂಕುತಿಟ್ಟು ‘ಶರಣ ಸೇವಾ ರತ್ನ’ ಎಂಬ ಯಕ್ಷ ತ್ರಿವಳಿ ಪ್ರದರ್ಶನಗೊಳ್ಳಲಿದೆ ಎಂದು ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ತಿಳಿಸಿದ್ದಾರೆ.

ತುಳು ಕ್ಯಾಲೆಂಡರ್ ಬಿಡುಗಡೆ

ಉಡುಪಿ: ಜೈ ತುಳುನಾಡು ಸಂಸ್ಥೆಯ ಉಡುಪಿ ಘಟಕದ ವತಿಯಿಂದ ತುಳು ಕಾಲಮಾನದ ಪ್ರಕಾರ ತಯಾರಿಸಿರುವ ಕ್ಯಾಲೆಂಡರ್ ಅನ್ನು (ಕಾಲ ಕೋಂದೆ) ಪತ್ರಿಕಾ ಭವನದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಆಕಾಶ್‌ರಾಜ್ ಜೈನ್ ಮಾತನಾಡಿ ತುಳು ಕ್ಯಾಲೆಂಡರ್ ಏಪ್ರಿಲ್ ತಿಂಗಳ ಮಧ್ಯದಲ್ಲಿ ಆರಂಭವಾಗುತ್ತದೆ. ಸಂಕ್ರಾಂತಿಯ ಮರುದಿನ ತಿಂಗಳಿನ ಆರಂಭದ ದಿನವಾಗಿದ್ದು ಮೊದಲ ದಿನವನ್ನು ಸಿಂಗೊಡೆ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು. ಯುವ ಪೀಳಿಗೆಗೆ ತೌಳವ ಸಮಾಜಕ್ಕೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಗಿದೆ ಎಂದರು. ಪ್ರಮುಖರಾದ ಸುಶೀಲಾ ಜಯಕರ್ ಪ್ರಶಾಂತ್ ಕುಂಜೂರು ಶರತ್ ಕುಮಾರ್ ಕೊಡವೂರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.