ADVERTISEMENT

ನೈಸರ್ಗಿಕ ಕೃಷಿ ಅನುಸರಿಸುವುದರಿಂದ ಲಾಭ: ಸಖಾರಾಮ ಸೋಮಯಾಜಿ

ಬ್ರಹ್ಮಾವರ: ಕೃಷಿ ಸಖಿಯರಿಗೆ ನೈಸರ್ಗಿಕ ಕೃಷಿ ತರಬೇತಿಗೆ ಚಾಲನೆ ನೀಡಿ ಸಖಾರಾಮ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:07 IST
Last Updated 25 ಜುಲೈ 2024, 5:07 IST
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಖಿಯರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಬ್ರಹ್ಮಾವರ: ಇಂದು ನಾವು ಪ್ರಕೃತಿ, ಕೃಷಿ, ಸ್ವಾಭಾವಿಕತೆಯಿಂದ ವಿಮುಖರಾಗುತ್ತಿದ್ದೇವೆ. ಕೃಷಿ ಸಖಿಯರು ರೈತರ ಬಳಿ ತೆರಳಿದಾಗ ಅವರು ಯಾವ ಬೆಳೆ ಬೆಳೆಯುತ್ತಿದ್ದಾರೆ ಎಂದು ಗಮನಿಸಿ ಅವರೊಂದಿಗೆ ಬೆರೆತು, ಅವರ ಭಾಷೆಯಲ್ಲಿ ಸಲಹೆ ನೀಡಬೇಕು ಎಂದು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ನಿವೃತ್ತ ಅಧಿಕಾರಿ ಸಖಾರಾಮ ಸೋಮಯಾಜಿ ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ನೈಸರ್ಗಿಕ ಕೃಷಿ ಕುರಿತಂತೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ) 5 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಸುತ್ತಮುತ್ತಲಿರುವ ಸ್ವಾಭಾವಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ಮಾಡುವ ನೈಸರ್ಗಿಕ ಕೃಷಿ ಅನುಸರಿಸಬೇಕು. ಹಸುಗಳು ಕೃಷಿಗೆ ಸಂಗಾತಿ. ಹಸುವಿನ ಗೊಬ್ಬರಕ್ಕೆ ಸಾಕಷ್ಟು ಆದ್ಯತೆ ನೀಡಬೇಕು. ಇದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಲಕ್ಷ್ಮಣ, ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಗುಣಮಟ್ಟ ಅಧಿಕಗೊಳಿಸಬೇಕು. ಸಾವಯವ ಕೃಷಿ ಅನುಸರಿಸುವುದರಿಂದ ಪ್ರಕೃತಿ ಹಸಿರುಮಯವಾಗಿರುತ್ತದೆ. ರಾಸಾಯನಿಕ ಗೊಬ್ಬರದಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಆದ್ದರಿಂದ ಪ್ರಕೃತಿಯನ್ನು ಸಮತೋಲನದಲ್ಲಿರಿಸಲು ಸಾವಯವ ಕೃಷಿ ಅನುಸರಿಸಬೇಕು ಎಂದು ಹೇಳಿದರು.

ಪಂಚಾಯಿತಿ ಹಂತದಲ್ಲಿ ವಿಸ್ತರಣಾ ಕಾರ್ಯಕರ್ತರ ಕೊರತೆ ನೀಗಿಸಲು ಕೃಷಿ ಸಖಿಯರನ್ನು ನೇಮಿಸಿ ಅವರ ಮೂಲಕ ಹಳ್ಳಿಗಳಲ್ಲಿ ಕೌಶಲಾಧಾರಿತ ತರಬೇತಿ ನೀಡಬಹುದು.
ಧನಂಜಯ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ

ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಸುಧೀರ್‌ ಕಾಮತ್ ಮಾತನಾಡಿ, ಹಳೆಯ ಕೃಷಿ ಪದ್ಧತಿಗಳನ್ನು ಮರೆಯಬಾರದು. ಸಸ್ಯಗಳಿಂದ ಮಾಡಿದ ಕಷಾಯವನ್ನು ಕೀಟನಾಶಕಗಳಾಗಿ ಉಪಯೋಗಿಸಿ ಕೀಟಬಾಧೆ ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.

ವಿಜ್ಞಾನಿಗಳಾದ ಜಯಪ್ರಕಾಶ ಎಸ್.ಎಂ, ಸದಾನಂದ ಆಚಾರ್ಯ, ಜಿಲ್ಲಾ ವ್ಯವಸ್ಥಾಪಕ ಅಶ್ವಿನಿ, ಕಲ್ಯಾಣಪುರದ ಕೃಷಿ ಸಖಿ ಶ್ರೀಲತಾ, ಇನ್ನಂಜೆಯ ಅಶ್ವಿನಿ ಪಿ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.