ADVERTISEMENT

ಕಡೆಗೋಲು ಕೃಷ್ಣನೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಇಂದು ಕೃಷ್ಣನ ಲೀಲೋತ್ಸವವಾದ ವಿಟ್ಲಪಿಂಡಿ ಉತ್ಸವ, ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:37 IST
Last Updated 30 ಆಗಸ್ಟ್ 2021, 16:37 IST
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಿದರು.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಿದರು.   

ಉಡುಪಿ: ಕಡೆಗೋಲು ಕೃಷ್ಣನೂರಿನಲ್ಲಿ ಸೋಮವಾರ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಶ್ರದ್ಧಾಭಕ್ತಿಯಿಂದ ಅಷ್ಟಮಿಯನ್ನು ಆಚರಿಸಲಾಯಿತು.

ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಗೋಪಾಲನಿಗೆ ಬಾಲಕೃಷ್ಣನ ಅಲಂಕಾರ ಮಾಡಿದ್ದರು. ಕಂಗೊಳಿಸುತ್ತಿದ್ದ ಮುದ್ದುಕೃಷ್ಣನನ್ನು ಭಕ್ತರು ಕಣ್ತುಂಬಿಕೊಂಡರು. ಕೃಷ್ಣಮಠದ ಒಳಾಂಗಣಕ್ಕೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು.

ಪರ್ಯಾಯ ಪೀಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಮಧ್ಯಾಹ್ನ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಿ ಮಹಾ ಪೂಜೆ ನೆರವೇರಿಸಿದರು. ಗೋಶಾಲೆಯಲ್ಲಿ ಪೂಜೆ ಸಲ್ಲಿಕೆ ಬಳಿಕ ಅಷ್ಟಮಠಗಳ ಸ್ವಾಮೀಜಿಗಳು ದೇವರ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿದರು. ನಿರ್ಜಲ ಉಪವಾಸವಿದ್ದ ಪರ್ಯಾಯ ಶ್ರೀಗಳು ರಾತ್ರಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯ ಚಂದ್ರೋದಯ ಸಮಯವಾದ 12.17ಕ್ಕೆ ಕೃಷ್ಣನಿಗೆ ಅರ್ಘ್ಯ ಪ್ರದಾನವಾಗಲಿದ್ದು, ನಂತರ ಮಠದೊಳಗಿನ ಚಂದ್ರನಿಗೆ ಕ್ಷೀರಾರ್ಘ್ಯ ಸಲ್ಲಿಕೆಯಾಗಲಿದೆ. ಪರ್ಯಾಯ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ಭಕ್ತರಿಗೆ 12.30ರ ಬಳಿಕ ಕೃಷ್ಣಮಠದ ಮಧ್ವಮಂಟಪ ಹಾಗೂ ಕನಕನ ಕಿಂಡಿ ಮುಂಭಾಗ ಅರ್ಘ್ಯ ಪ್ರದಾನಕ್ಕೆ ಅವಕಾಶವಿತ್ತು.

ಕೊರೊನಾ ಕಾರಣದಿಂದ ಈ ಬಾರಿ ಕೃಷ್ಣಮಠದಿಂದ ಕೃಷ್ಣ ವೇಷ ಸ್ಪರ್ಧೆ ಆಯೋಜನೆ ಇರಲಿಲ್ಲ. ರಥಬೀದಿಯಲ್ಲಿ ವೇಷಧಾರಿಗಳ ಹಾಗೂ ಹುಲಿಕುಣಿತದ ರಂಗು ಇರಲಿಲ್ಲ. ಜಾನಪದ ಕಲಾತಂಡಗಳ ಮೆರಗೂ ಇಲ್ಲ. ಜಿಟಿಜಿಟಿ ಮಳೆಯ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಾಗಿರಲಿಲ್ಲ.

ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಮಠದೊಳಗೆ ನಡೆದವು. ಮಧ್ವ ಮಂಟಪದಲ್ಲಿ ರಾಮಣ್ಣ ಭಜಂತ್ರಿ ಮತ್ತು ಬಳಗದಿಂದ ಶಹನಾಯಿ ವಾದನ, ಸೂರ್ಯಶಾಲೆಯಲ್ಲಿ ದಾಮೋದರ ಶೇರಿಗಾರ್ ಮತ್ತು ಬಳಗದಿಂದ ಸ್ಯಾಕ್ಸೋಫೋನ್‌ ವಾದನ, ನಿತೀಶ್ ಅಮ್ಮಣ್ಣಾಯ ಮತ್ತು ಬಳಗದಿಂದ ಕೊಳಲು ವಾದನ, ಚೆನ್ನೈ ಕೆ.ಎಂ. ಮಣಿ ಮತ್ತು ಬಳಗದಿಂದ ನಾಗಸ್ವರ ನಡೆಯಿತು. ಬಳಿಕ ರಾಜಾಂಗಣದಲ್ಲಿ ಅಷ್ಟ ಮಠಾಧೀಶರು ಕೃಷ್ಣನ ಸಂದೇಶ ನೀಡಿದರು.

ಇಂದು ವಿಟ್ಲಪಿಂಡಿ ಉತ್ಸವ

ಕೋವಿಡ್ ಹಿನ್ನೆಲೆಯಲ್ಲಿ ಮಂಗಳವಾರ ರಥಬೀದಿಯಲ್ಲಿ ಸರಳ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಕೃಷ್ಣನ ಲೀಲೋತ್ಸವದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿಲ್ಲ. ಮಧ್ಯಾಹ್ನ 3.30ಕ್ಕೆ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಸುವರ್ಣ ರಥದಲ್ಲಿಟ್ಟು ರಥೋತ್ಸವ ನಡೆಸಲಾಗುತ್ತದೆ. ಅನಂತೇಶ್ವರ ಹಾಗೂ ಚಂದ್ರೇಶ್ವರ ಉತ್ಸವವೂ ನಡೆಯಲಿದೆ. ಈ ಸಂದರ್ಭ ಯತಿಗಳು ಹಾಗೂ ಮಠದ ಸಿಬ್ಬಂದಿ ಮಾತ್ರ ಭಾಗವಹಿಸಲಿದ್ದಾರೆ. ಈ ಬಾರಿ ಅನ್ನ ಸಂತರ್ಪಣೆಯೂ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.