ADVERTISEMENT

ಕಚೇರಿ ಸುಂದರವಾಗಿದೆ, ವ್ಯವಸ್ಥೆ ಬದಲಾಗಬೇಕಿದೆ

ಲಂಚಮುಕ್ತ ಕರ್ನಾಟಕ ಅಭಿಯಾನದಲ್ಲಿ ಕೆಆರ್‌ಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 16:28 IST
Last Updated 6 ಮಾರ್ಚ್ 2021, 16:28 IST
ಉಡುಪಿ ತಹಶೀಲ್ದಾರ್ ಕಚೇರಿಯಲ್ಲಿ ಆಗಬೇಕಾದ 18 ಅಂಶಗಳ ಕಾರ್ಯಗಳ ಕುರಿತು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಅವರಿಗೆ ಕೆಆರ್‌ಎಸ್‌ ಪಕ್ಷದಿಂದ ಮನವಿ ಸಲ್ಲಿಸಲಾಯಿತು.
ಉಡುಪಿ ತಹಶೀಲ್ದಾರ್ ಕಚೇರಿಯಲ್ಲಿ ಆಗಬೇಕಾದ 18 ಅಂಶಗಳ ಕಾರ್ಯಗಳ ಕುರಿತು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಅವರಿಗೆ ಕೆಆರ್‌ಎಸ್‌ ಪಕ್ಷದಿಂದ ಮನವಿ ಸಲ್ಲಿಸಲಾಯಿತು.   

ಉಡುಪಿ: ಇಲ್ಲಿನ ತಾಲ್ಲೂಕು ಕಚೇರಿಯ ಬಾಹ್ಯನೋಟ ಸುಂದರವಾಗಿದೆ, ಆದರೆ, ಆಂತರಿಕ ಆಡಳಿತ ವ್ಯವಸ್ಥೆ ಬಹಳಷ್ಟು ಸುಧಾರಣೆಯಾಗಬೇಕಿದೆ. ಪ್ರಜ್ಞಾವಂತರು, ಬುದ್ಧಿವಂತರ ಜಿಲ್ಲೆಯಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದು ಬೇಸರದ ಸಂಗತಿ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

ಕೆಆರ್‌ಎಸ್‌ ಪಕ್ಷದಿಂದ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಲಂಚಮುಕ್ತ ಕರ್ನಾಟಕ ಅಭಿಯಾನದ ಭಾಗವಾಗಿ ಶನಿವಾರ ಉಡುಪಿ ತಾಲ್ಲೂಕು ಕಚೇರಿಗೆ ಭೇಟಿನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಸರ್ಕಾರಿ ಕಚೇರಿಗಳಲ್ಲಿ ಮೂಲಸೌಕರ್ಯಗಳು ಸಮರ್ಪಕವಾಗಿವೆಯೇ, ಸಾರ್ವಜನಿಕರೊಂದಿಗೆ ಸಿಬ್ಬಂದಿಯ ವರ್ತನೆ ಸರಿ ಇದೆಯೇ, ಸರ್ಕಾರಿ ಸೇವೆಗಳನ್ನು ಪಡೆಯಲು ಶುಲ್ಕದ ದರ ಪಟ್ಟಿ ಪ್ರದರ್ಶನ ಮಾಡಲಾಗಿದೆಯೇ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇದೆಯೇ, ಸರ್ಕಾರಿ ಸೇವೆ ನೀಡಲು ಲಂಚ ಸ್ವೀಕರಿಸಲಾಗುತ್ತಿದೆಯೇ ಎಂಬ ಬಗ್ಗೆ ಖುದ್ದು ಪರಿಶೀಲಿಸಿ ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ರವಿಕೃಷ್ಣಾರೆಡ್ಡಿ ತಿಳಿಸಿದರು.

ADVERTISEMENT

ಉಡುಪಿ ತಾಲ್ಲೂಕು ಕಚೇರಿಯಲ್ಲಿ ಮೂಲಸೌಕರ್ಯಗಳು ಉತ್ತಮವಾಗಿವೆ, ಆದರೆ ವ್ಯವಸ್ಥೆಯೊಳಗೆ ಹಲವು ಲೋಪದೋಷಗಳು ಕಂಡುಬಂದವು. ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಅನಧಿಕೃತ ವ್ಯಕ್ತಿಯೊಬ್ಬನನ್ನು ನೇಮಿಸಿಕೊಂಡು ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಲು ಕೌಂಟರ್‌ನಲ್ಲಿ ಕೂರಿಸಲಾಗಿದೆ. ಸರ್ವೆಯರ್ ಕೂಡ ಅನಧಿಕೃತವಾಗಿ ಸಹಾಯಕರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಕಚೇರಿಗಳಲ್ಲಿ ವಿಭಾಗವಾರು ಮಾಹಿತಿ, ಅಧಿಕಾರಿಗಳ ಪದನಾಮ, ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ಪ್ರದರ್ಶಿಸಬೇಕು. ಕಚೇರಿಯಲ್ಲಿ ಹಾಜರಿರುವ ಅಧಿಕಾರಿಗಳ ವಿವರ ಫಲಕದಲ್ಲಿ ಹಾಕಬೇಕು ಎಂದು ತಹಶೀಲ್ದಾರ್‌ಗೆ ತಿಳಿಸಲಾಗಿದೆ ಎಂದರು.

ಸಾರ್ವಜನಿಕರು ಸರ್ಕಾರದ ಸೇವೆ ಪಡೆಯಲು ಲಂಚಕೊಡಬಾರದು. ಸಕಾಲದ ಮೂಲಕವೇ ಸೇವೆಗಳನ್ನು ಪಡೆಯಬೇಕು. ಸಕಾಲದಡಿ ಕಾಲಮಿತಿಯಲ್ಲಿ ಕೆಲಸ ಮಾಡದಿದ್ದರೆ ಅಧಿಕಾರಿಗಳು ದಂಡ ಪಾವತಿಸಬೇಕಾಗುತ್ತದೆ. ಲಂಚ ಕೇಳಿದರೆ ಎಸಿಬಿ ಹಾಗೂ ಲೋಕಾಯುಕ್ತ ಮೊರೆಹೋಗಬಹುದು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಾದ ಜವಾಬ್ದಾರಿ ಸಾರ್ವಜನಿಕರದ್ದು ಎಂದರು.

ಇದೇವೇಳೆ ತಹಶೀಲ್ದಾರ್ ಕಚೇರಿಯಲ್ಲಿ ಆಗಬೇಕಾದ 18 ಅಂಶಗಳ ಕಾರ್ಯಗಳ ಕುರಿತು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ಜಂಟಿ ಕಾರ್ಯದರ್ಶಿ ಸೋಮಸುಂದರ್, ಜಿಲ್ಲಾ ಘಟಕದ ಅಧ್ಯಕ್ಷ ಕಿರಣ್‌ಕುಮಾರ್, ಯುವ ಘಟಕದ ಕಾರ್ಯದರ್ಶಿ ರಾಮದಾಸ್ ಪೈ, ಮುಖಂಡರಾದ ಶಾಹಿದ್ ಅಲಿ, ಪೌಲ್‌, ಅಲೆಕ್ಸಾಂಡರ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.