ADVERTISEMENT

ಮುಷ್ಕರ: ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಹೊರ ಜಿಲ್ಲೆಗಳಿಂದ ಬರುವ ಬಸ್‌ಗಳ ಸಂಖ್ಯೆ ವಿರಳ: ಗಂಟೆಗಟ್ಟಲೆ ಕಾದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:04 IST
Last Updated 6 ಆಗಸ್ಟ್ 2025, 5:04 IST
ದೀರ್ಘ ದೂರ ಬಸ್‌ಗಳಿಗಾಗಿ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು 
ದೀರ್ಘ ದೂರ ಬಸ್‌ಗಳಿಗಾಗಿ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರು    

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರ ನಡೆಸಿದ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಉಡುಪಿ ಮತ್ತು ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದವು. ಉಡುಪಿ ನಗರ ವ್ಯಾಪ್ತಿಯಲ್ಲಿ ನರ್ಮ್‌ ಬಸ್‌ಗಳು ಬೆಳಿಗ್ಗೆಯಿಂದಲೇ ಸಂಚಾರ ನಡೆಸಿದವು.

ಉಡುಪಿ ಹಾಗೂ ಕುಂದಾಪುರ ಬಸ್‌ ನಿಲ್ದಾಣಗಳಲ್ಲಿ ಬೆಳಿಗ್ಗೆ 7.30ರ ವರೆಗೆ ಬಸ್‌ಗಳು ಸಂಚಾರ ನಡೆಸಿಲ್ಲ. ಅನಂತರ ಎಲ್ಲಾ ಬಸ್‌ಗಳು ಸಂಚಾರ ನಡೆಸಿವೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ADVERTISEMENT

‘ಉಡುಪಿ ಬಸ್‌ ನಿಲ್ದಾಣಕ್ಕೆ ಹುಬ್ಬಳಿ ಮೊದಲಾದೆಡೆಯಿಂದ ಬರುವ ಬಸ್‌ಗಳು ಬಂದಿಲ್ಲ. ಇಲ್ಲಿಂದ ಹೊರಡುವ ಎಲ್ಲಾ ಬಸ್‌ಗಳು ನಿಗದಿತ ಸಮಯಕ್ಕೆ ಸಂಚಾರ ನಡೆಸಿವೆ’ ಎಂದು ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ನಿಲ್ದಾಣಾಧಿಕಾರಿ ಅಶೋಕ್‌ ಹೆಗ್ಡೆ ತಿಳಿಸಿದರು.

ಬೇರೆ ಜಿಲ್ಲೆಗಳಿಂದ ಬರುವ ಬಸ್‌ಗಳು ಬಾರದ ಕಾರಣ ಉತ್ತರ ಕರ್ನಾಟಕದ ಭಾಗಕ್ಕೆ ತೆರಳುವವರು ಮತ್ತು ಧರ್ಮಸ್ಥಳ ಮಾರ್ಗವಾಗಿ ತೆರಳುವ ಪ್ರಯಾಣಿಕರು ಉಡುಪಿಯ ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವರು ಕಾದು ಕಾದು ಸುಸ್ತಾಗಿ ಬಳಿಕ ಖಾಸಗಿ ಬಸ್‌ ನಿಲ್ದಾಣಕ್ಕೆ ತೆರಳಿದರು.

ದೇವಸ್ಥಾನಗಳ ಭೇಟಿಗಾಗಿ ಬೆಂಗಳೂರಿನಿಂದ ಉಡುಪಿಗೆ ಬಂದಿದ್ದ ಹಲವು ಮಂದಿ ಪ್ರಯಾಣಿಕರು ಧರ್ಮಸ್ಥಳಕ್ಕೆ ತೆರಳಲು ಬಸ್‌ ಸಿಗದೆ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಾದು ಬಳಿಕ ಖಾಸಗಿ ಬಸ್‌ನಿಲ್ದಾಣಕ್ಕೆ ತೆರಳಿದರು.

‘ನಾವು 15 ಮಂದಿ ಬೆಂಗಳೂರಿನಿಂದ ಕೃಷ್ಣ ಮಠಕ್ಕೆ ಬಂದಿದ್ದೆವು. ಇಲ್ಲಿಂದ ಧರ್ಮಸ್ಥಳಕ್ಕೆ ತೆರಳಲು ಬಸ್‌ ಸಿಕ್ಕಿಲ್ಲ. ಸಾರಿಗೆ ನೌಕರರು ದಿಢೀರ್ ಮುಷ್ಕರ ನಡೆಸಿರುವುದರಿಂದ ನಾವು ಗಂಟೆಗಟ್ಟಲೆ ಬಸ್‌ ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು’ ಎಂದು ಪ್ರಯಾಣಿಕೆ ರೇಖಾ ತಿಳಿಸಿದರು.

ಸಾರಿಗೆ ನೌಕರರ ಮುಷ್ಕರದ ಕಾರಣ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಭದ್ರತೆಗಾಗಿ ಡಿಎಆರ್ ಪೊಲೀಸರನ್ನು ನಿಯೋಜಿಸಲಾಗಿತ್ತು.

ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು

Highlights - ಖಾಸಗಿ ಬಸ್‌ಗಳ ಮೊರೆ ಹೋದ ಜನ ದೀರ್ಘ ದೂರ ಬಸ್‌ಗಳು ಬಾರದೆ ಪ್ರಯಾಣಿಕರಿಗೆ ಸಮಸ್ಯೆ

Cut-off box - ವಿಶೇಷ ಬಸ್‌ಗಳ ವ್ಯವಸ್ಥೆ ಉಡುಪಿ: ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮುಷ್ಕರದ ಕಾರಣ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸಲು ಜಿಲ್ಲೆಯಲ್ಲಿ ವಿಶೇಷ ಬಸ್‌ಗಳ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಹಾಗೂ ದೂರುಗಳನ್ನು ಸ್ವೀಕರಿಸಲು ಮಣಿಪಾಲದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ದಿನದ 24ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ. 0820-2575137 9449864020 ಹಾಗೂ 7019244639 ಸಂಪರ್ಕಿಸಬಹುದು. ಉಡುಪಿ ಸರ್ಕಾರಿ ಬಸ್ ನಿಲ್ದಾಣ ಕುಂದಾಪುರ ಸರ್ಕಾರಿ ಬಸ್ ನಿಲ್ದಾಣ ಹಾಗೂ ಕಾರ್ಕಳ ಸರ್ಕಾರಿ ಬಸ್ ನಿಲ್ದಾಣದಲ್ಲಿ ತಲಾ 5 ಬಸ್‌ಗಳನ್ನು ಕಾಯ್ದಿರಿಸಲಾಗಿದ್ದು ಈ ಸಂಬಂಧ ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದ್ದಲ್ಲಿ ಪ್ರೈವೇಟ್ ಬಸ್ ಅಸೋಶಿಯೇಷನ್ ವತಿಯಿಂದ ಖಾಸಗಿ ಬಸ್‌ಗಳ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಬಸ್‌ ನಿಲ್ದಾಣದ ಹತ್ತಿರ ಇರುವ ಆಟೊ ನಿಲ್ದಾಣಗಳ ಆಟೊ ಚಾಲಕರು ಪ್ರಯಾಣಿಕರಿಂದ ನಿಗದಿತ ಶುಲ್ಕವನ್ನೇ ಸ್ವೀಕರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.