ADVERTISEMENT

ಪಡಿತರದಲ್ಲಿ ಕುಚಲಕ್ಕಿ ವಿತರಣೆಗೆ ಕೇಂದ್ರ ಅನುಮತಿ

ಕರಾವಳಿಯ ಮೂರು ಜಿಲ್ಲೆಗಳ ಪಡಿತರ ಕಾರ್ಡ್‌ದಾರರಿಗೆ ಹಾಗೂ ರೈತರಿಗೆ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:45 IST
Last Updated 7 ಅಕ್ಟೋಬರ್ 2022, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಸ್ಥಳೀಯ ಕುಚಲಕ್ಕಿ ಪ್ರಭೇಧಗಳನ್ನು ಪಡಿತರ ವ್ಯವಸ್ಥೆಯಡಿಯಲ್ಲಿ ವಿತರಿಸಲು ಕೇಂದ್ರ ಸರ್ಕಾರ ಈ ವರ್ಷವೂ ಅನುಮತಿ ಮುಂದುವರಿಸಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ರೈತರು ಬೆಳೆಯುವ ಸ್ಥಳೀಯ ಕುಚಲಕ್ಕಿ ಪ್ರಭೇಧಗಳಾದ ಎಂಒ 4, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ ಮತ್ತು ಅಭಿಲಾಷ್ ತಳಿಗಳನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಖರೀದಿಸಿ ಪಡಿತರ ವಿತರಣ ವ್ಯವಸ್ಥೆಯ ಮೂಲಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಫಲಾನುಭವಿಗಳಿಗೆ ವಿತರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕರು ಪಡಿತರದಲ್ಲಿ ಕುಚಲಕ್ಕಿ ವಿತರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ಸಚಿವೆ ‌ಶೋಭಾ ಕರಂದ್ಲಾಜೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಸರ್ಕಾರದ ಪರವಾಗಿ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೂ ಪತ್ರ ಬರೆದು ಪ್ರಸ್ತಾವಕ್ಕೆ ಅನುಮೋದನೆ ನೀಡುವಂತೆ ಕೋರಲಾಗಿತ್ತು.

ADVERTISEMENT

ಮನವಿಯನ್ನು ಪರಿಗಣಿಸಿದ ಸಚಿವರು ಕುಚಲಕ್ಕಿ ಪ್ರಭೇಧಗಳನ್ನು ಬೆಳೆಯುವ ಜಿಲ್ಲೆಗಳಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಿ ಪಡಿತರ ಮೂಲಕ ವಿತರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ. ಇದರಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೃಷಿಗೆ ಒತ್ತು ಸಿಗಲಿದ್ದು ಭತ್ತ ಬೆಳೆಯಲು ಪ್ರೋತ್ಸಾಹ ಸಿಕ್ಕಿದಂತಾಗಿದೆ. ಕುಚ್ಚಲಕ್ಕಿಯನ್ನು ಹೆಚ್ಚಾಗಿ ಸೇವಿಸುವವರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಲಭ್ಯವಾಗಲಿದೆ.

ಸ್ಥಳೀಯ ರೈತರ ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆ ಈಡೇರಿಸಿದ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಸಹಕಾರ ನೀಡಿದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಧನ್ಯವಾದ ಸಲ್ಲಿಸುವುದಾಗಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.